ನವದೆಹಲಿ,ಅ 04 (MSP) : ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ವಿಚಾರಣೆ ನಡೆಸಲಿದೆ. 2019 ಫೆಬ್ರವರಿ 18-21 ರಂದು ಈ ಪ್ರಕರಣದ ವಿಚಾರಣೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಕೈಗೆತ್ತಿಕೊಳ್ಳಲಿದೆ.
ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 2017 ರ ಏಪ್ರಿಲ್ ನಲ್ಲಿ 48 ವರ್ಷದ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ಭಾರತವು ಪಾಕ್ ನ್ಯಾಯಾಲಯದ ಆದೇಶದ ವಿರುದ್ದವಾಗಿ 2017 ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ ಕುಲಭೂಷಣ್ ಜಾಧವ್ ಮರಣದಂಡನೆಯ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿ, ಸಿಐಜೆ ಆದೇಶ ಹೊರಡಿಸಿತ್ತು.
ಇದೀಗ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳಲಿದ್ದು ಫೆ.18-21 ರಂದು ನಡೆಯಲಿರುವ ವಿಚಾರಣೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಇಂಗ್ಲೀಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ನೇರ ಪ್ರಸಾರ ಮಾಡುವುದಕ್ಕೆ ತೀರ್ಮಾನಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಸಿಜೆಗೆ ಭಾರತ ಹಾಗೂ ಪಾಕಿಸ್ತಾನ ಈಗಾಗಲೇ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದು, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಆತನಿಗೆ ಕೌನ್ಸಲರ್ ನೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡದೇ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಭಾರತ ಆರೋಪಿಸಿತ್ತು. ಭಾರತದ ಹಲವು ಮನವಿಗೂ ಸ್ಪಂದಿಸದಿದ್ದ ಪಾಕಿಸ್ತಾನ, ಪ್ರಕರಣ ಅಂತರಾಷ್ಟ್ರೀಯವಾಗಿ ಸುದ್ದಿಯಾದ ಬಳಿಕ, ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ತಾಯಿಗೆ ಹಾಗೂ ಪತ್ನಿಗೆ ಅವಕಾಶ ನೀಡಿತ್ತು