ಬೆಂಗಳೂರು, ಅ 04 (MSP): ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಅ.04 ರ ಗುರುವಾರ ಸಚಿವ ಡಿ.ಕೆ.ಶಿವಕುಮಾರ್ ಉಪಾಹಾರ ಕೂಟ ಆಯೋಜಿಸಿ ಕಾಂಗ್ರೆಸ್ ಮುಖಂಡರು ಮತ್ತು ಸಚಿವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಸರ್ಕಾರದ ಪ್ರಭಾವಿ ಸಚಿವರಲ್ಲೊಬ್ಬರಾದ ಡಿ.ಕೆ.ಶಿವಕುಮಾರ್ ಈ ಉಪಾಹಾರ ಕೂಟವನ್ನು ಆಯೋಜಿಸಿದ್ದು, ಡಿಸಿಎಂ ಡಾ.ಜಿ.ಪರಮೇಶ್ವರ್, ಹಿರಿಯ ಸಚಿವ ಆರ್.ವಿ ದೇಶ್ಪಾಂಡೆ ,ಸಚಿವೆ ಜಯಮಾಲಾ, ಪಕ್ಷೇತರ ಶಾಸಕ, ಸಚಿವ ಆರ್.ಶಂಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಪ್ರಮುಖರು ಭಾಗವಹಿಸಿದ್ದರು. ಆದರೆ ಇವರೆಲ್ಲರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಇವರ ಗೈರು ಹಾಜರಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆಶಿ, ಈ ಉಪಹಾರ ಕೂಟ ಆಯೋಜಿಸಲು ಸಿದ್ದರಾಮಯ್ಯ ಅವರೇ ಸಲಹೆ ನೀಡಿದ್ದು ಎಂದು ಸಮಜಾಯಿಷಿ ನೀಡಿದ್ರು. ಆದ್ರೆ ಇದಕ್ಕಿಂತಲೂ ಮುಖ್ಯವಾಗಿ ಚರ್ಚೆ ನಡೆಸಲೆಂದು ಆಯೋಜಿಸಿದ್ದ ಉಪಹಾರ ಕೂಟದಲ್ಲಿ ನಿಜವಾದ ಚರ್ಚೆ ನಡೆಯಿತೋ ಇಲ್ಲವೋ ತಿಳಿದಿಲ್ಲ. ಅದರೆ ಉಪಹಾರ ಕೂಟದಲ್ಲಿ ಬಳಸಲಾದ ಬೆಳ್ಳಿ ತಟ್ಟೆ, ಬೆಳ್ಳಿ ಲೋಟ ಮಾತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತು.
ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲಾ ಸಚಿವರು, ಶಾಸಕರಿಗೂ ಡಿಕೆಶಿಯವರು ಬೆಳ್ಳಿ ತಟ್ಟೆ, ಲೋಟಗಳಲ್ಲೇ ಉಪಚರಿಸಿದ್ದಾರೆ. ಐಷಾರಾಮಿ ತಿಂಡಿ ತಿನಿಸುಗಳ ಜೊತೆಗೆ ಬೆಳ್ಳಿ ತಟ್ಟೆಗಳನ್ನೂ ಬಳಸಿರುವುದು ಸಾರ್ವಜನಿಕ ವಲಯದಲ್ಲಿ ಮಾತ್ರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.