ಬೆಳ್ಮಣ್,ಅ 04 (MSP): ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1 ರಲ್ಲಿ ಟೋಲ್ ಸಂಗ್ರಹ ಮುಂದಾಗಿರುವ ಗುತ್ತಿಗೆದಾರನ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಅ.15 ರಿಂದ ಸುಂಕ ವಸೂಲಿ ಮಾಡಲು ಟೆಂಡರ್ ಪಡೆದ ಗುತ್ತಿಗೆದಾರರು ಮುಂದಾಗಿದ್ದಾರೆ.
ಕೆಆರ್ಡಿಸಿಎಲ್ನ ಜತೆ ಸುಂಕ ವಸೂಲಾತಿಯ ಬಗ್ಗೆ ಗುತ್ತಿಗೆ ವಹಿಸಿಕೊಂಡಿರುವ ಮೈಸೂರಿನ ಮಿತ್ರಾ ಇನ್ಪೋ ಸೊಲ್ಯೂಷನ್ ನ ಜತೆ ಒಡಂಬಡಿಕೆ ನಡೆದಿದ್ದು ಈ ಬಗ್ಗೆ ಪಂಚಾಯತ್ನ ಯಾವುದೇ ನಿರಾಪೇಕ್ಷಣ ಪತ್ರದ ಅಗತ್ಯ ಇಲ್ಲದೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡದಾಗಿ ಬ್ಯಾರಿಗೇಟ್ಗಳನ್ನು ಹಾಕಿ ಸಂಚರಿಸುವ ವಾಹನ ಸವಾರರಿಂದ ಸುಂಕ ವಸೂಲಿಯನ್ನು ಮಾಡಲು ಹೊರಟಿದೆ. ಸುಂಕ ವಸೂಲಾತಿ ಕೇಂದ್ರದ ವಿರುದ್ದ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಾರ್ಕಳ ಕ್ಷೇತ್ರ ಶಾಸಕ ವಿ.ಸುನೀಲ್ ಕುಮಾರ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜೊತೆಗೆ ಸುಂಕ ವಸೂಲಾತಿ ಕೇಂದ್ರ ಸ್ಥಾಪನೆಯ ವಿಚಾರನ್ನು ಕೈ ಬಿಡುವಂತೆ ಸಚಿವೆ ಜಯಮಾಲ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಹಾಗೂ ಬೆಳ್ಮಣ್ ಜಿಲ್ಲಾ ಪಂಚಾಯತಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ ಹಾಗೂ ಇತರ ಮುಖಂಡರು ಸೇರಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದ್ದಾರೆ.