ಕಾಸರಗೋಡು, ಅ 4(SM): ಜಿಲ್ಲೆಯ ಹಲವೆಡೆ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಜೊತೆಗೆ ಬೀಸಿದ ಸುಂಟರ ಗಾಳಿಗೆ ಭಾರೀ ಹಾನಿ ಉಂಟಾಗಿದೆ. ಕಾಸರಗೋಡು ನಗರ ಸುತ್ತಮುತ್ತ ಅಪಾರ ನಾಶ ಉಂಟಾಗಿದೆ. ನಗರದ ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಹಲವು ಮಳಿಗೆಗಳ ಮೇಲ್ಛಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿದೆ.
ಕಟ್ಟಡ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಧರಾಶಾಯಿಯಾಗಿರುವ ಘಟನೆ ಕೂಡ ಕಾಸರಗೋಡಿನಲ್ಲಿ ನಡೆದಿದೆ. ಹಲವೆಡೆ ಮರಗಳು ಕೂಡ ಧರಶಾಹಿಯಾಗಿದ್ದು, ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿ, ಕಂಬಗಳಿಗೆ ಕೂಡ ಹಾನಿ ಸಂಭವಿಸಿದೆ.
ಇನ್ನು ಕೆಲವು ಪ್ರದೇಶಗಳಲ್ಲಿ ಕಾರು, ಬೈಕ್ ಸೇರಿದಂತೆ ಹಲವು ವಾಹನಗಳು ಜಖಂ ಗೊಂಡಿದೆ. ಕಟ್ಟಡದ ಕೆಳಗಡೆ ನಿಲುಗಡೆಗೊಳಿಸಲಾಗಿದ್ದ ವಾಹನಗಳ ಮೇಲೆ ಮಹಡಿಗೆ ಅಳಾವಡಿಸಲಾಗಿದ್ದ ಶೀಟ್ ಗಳು ಉರುಳಿ ಬಿದ್ದಿವೆ.
ಕಾಸರಗೋಡು ಹೊಸಬಸ್ಸು ನಿಲ್ದಾಣ ಸಮೀಪದ ಕೋಟೆಕಣಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮರ ತೆರವುಗೊಳಿಸಿದರು. ಅಮೈ ಕಾಲನಿಯಲ್ಲಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ.