ಉಳ್ಳಾಲ, ಅ. 04(SM): ಕರಾವಳಿಯಲ್ಲಿ ಗುರುವಾರ ಸಂಜೆ ವೇಳೆಗೆ ಸುರಿದ ಭಾರೀ ಸಿಡಿಲು ಮಳೆಗೆ ಉಳ್ಳಾಲದ ತಲಪಾಡಿ ನಾರ್ಲ ಪಡೀಲ್ ಬಳಿ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು ತೆಂಗಿನ ಮರ ಬಿದ್ದು ಕಾರೊಂದಕ್ಕೆ ಹಾನಿಯಾಗಿದೆ. ತಲಪಾಡಿ ನಾರ್ಲ ಪಡೀಲ್ ನಿವಾಸಿ ಹೇಮಾವತಿ ಕೃಷ್ಣ ಪೂಜಾರಿ ಅವರ ಮನೆಗೆ ಸಂಜೆ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದ್ದು ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ. ಘಟನೆಯ ವೇಳೆಗೆ ಮನೆಯಲ್ಲಿದ್ದ ಇಬ್ಬರು ಹೊರಗಡೆ ಇದ್ದರಿಂದ ದೊಡ್ಡದೊಂದು ದುರಂತ ತಪ್ಪಿದಂತಾಗಿದೆ.
ಇನ್ನೊಂದು ಘಟನೆಯಲ್ಲಿ ತಲಪಾಡಿ ನಾರ್ಲದಲ್ಲಿ ಕೀರ್ತಿ ಶೆಟ್ಟಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ನಾರ್ಲದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.