ಮಂಗಳೂರು ಅ05(SS): ನಗರದಲ್ಲಿ ಮಂಗಳಮುಖಿಯರ ವೇಷ ಹಾಕಿಕೊಂಡು ಜನರ ಕಣ್ಣಿಗೆ ಮಣ್ಣೆರಚುತ್ತಿದ್ದ ನಕಲಿ ಮಂಗಳ ಮುಖಿಯರ ಬಣ್ಣ ಬಯಲು ಮಾಡಿದ ಘಟನೆ ನಡೆದಿದೆ. ಸಾಮಾಜಿಕ ಕಾರ್ಯಕರ್ತರಾದ ಸೌರಾಜ್ ಈ ಮಾದರಿ ಕೆಲಸವನ್ನು ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಂಡವರು.
ನಕಲಿ ಮಂಗಳ ಮುಖಿಯರ ಹಾವಳಿ ಕರಾವಳಿಯಲ್ಲಿ ಹೆಚ್ಚಾಗುತ್ತಿದ್ದು. ಹಣಕ್ಕಾಗಿ ಜನರನ್ನು ಪೀಡಿಸುತ್ತಿರುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗುತ್ತಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸೌರಾಜ್ ನಕಲಿ ಮಂಗಳ ಮುಖಿಯರ ನಿಜ ಬಣ್ಣ ಬಯಲು ಮಾಡಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ನಗರದಲ್ಲಿರುವ ಕದ್ರಿ ಉದ್ಯಾನವನದಲ್ಲಿ ನಕಲಿ ಮಂಗಳಮುಖಿಯರು ಜನರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದರು. ಈ ವೇಳೆ ಕದ್ರಿ ಪಾರ್ಕ್ ಒಳಗೆ ದಾಳಿ ಇಟ್ಟ ಸೌರಾಜ್ ಈ ನಕಲಿ ಮಂಗಳ ಮುಖಿಯರ ಅಸಲಿಯತ್ತು ಬಯಲು ಮಾಡಿದ್ದಾರೆ. ಮಾತ್ರವಲ್ಲ ನಕಲಿ ಮಂಗಳಮುಖಿಯರ ವಂಚನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟು ವೈರಲ್ ಮಾಡಿದ್ದಾರೆ.
ತಲೆಗೆ ಟೋಪನ್ ಹಾಕಿ ಯುವತಿಯರಂತೆ ಉಡುಪುಗಳನ್ನು ತೊಟ್ಟು ಕದ್ರಿ ಉದ್ಯಾನವನಕ್ಕೆ ಬರುವ ಪ್ರವಾಸಿಗರನ್ನು ಈ ನಕಲಿ ಮಂಗಳ ಮುಖಿಯರು ಹಣಕ್ಕಾಗಿ ಪೀಡಿಸುತ್ತಿದ್ದರು. ಮಾತ್ರವಲ್ಲ, ಇವರು ಉದ್ಯಾನವನದೊಳಗೆ ಇರುವ ಹುಡುಗಿಯರನ್ನು ಚುಡಾಯಿಸುವ ಕೆಲಸವನ್ನೂ ಮಾಡುತ್ತಿದ್ದರು. ಈ ವೇಳೆ ಸೌರಾಜ್ ನಕಲಿ ಮಂಗಳ ಮುಖಿಯರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನಕಲಿ ಮಂಗಳ ಮುಖಿಯರಲ್ಲಿ ಇಬ್ಬರು ಪುರುಷರಿದ್ದು, ಒಬ್ಬನ ಹೆಸರು ಗೋಪಿ ಎಂದು ತಿಳಿದು ಬಂದಿದೆ. ಮತ್ತೋರ್ವ ಸ್ಥಳದಿಂದ ಪರಾರಿಯಾಗಿದ್ದಾನೆ. ಕರಾವಳಿಯ ಜನ ಸೇರಿದಂತೆ ಕದ್ರಿ ಉದ್ಯಾನವನಕ್ಕೆ ಬರುವ ಪ್ರವಾಸಿಗರನ್ನು ವಂಚಿಸುವ ಈ ನಕಲಿ ಮುಖಿಯರು ಮಡಿಕೇರಿ ಮೂಲದವರು ಎಂದು ಹಿಂದಿ ಭಾಷೆಯಲ್ಲಿ ಉತ್ತರಿಸಿದ್ದಾರೆ. ಆದರೆ ನಿಜಾಂಶ ತನಿಖೆಯಿಂದ ಬಯಲಾಗಬೇಕಿದೆ.
ಒಟ್ಟಾರೆ ಸಾಮಾಜಿಕ ಕಾರ್ಯಕರ್ತರಾದ ಸೌರಾಜ್ ಮಾಡಿರುವ ಈ ಮಾದರಿ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮಾತ್ರವಲ್ಲ, ಹುಡುಗಿರನ್ನು ಪೀಡಿಸುವ ಈ ನಕಲಿ ಮಂಗಳಮುಖಿಯರಿಗೆ ಶಿಕ್ಷೆಯಾಗಬೇಕು ಎಂದು ಕರಾವಳಿಯ ಮಂಗಳಮುಖಿಯರ ಸಂಘಟನೆಯು ಸೌರಾಜ್ ಬೆಂಬಲಕ್ಕೆ ನಿಂತಿದೆ.
ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿ ಜೊತೆ ಪ್ರತಿಕ್ರಿಯಿಸಿರುವ ಸೌರಾಜ್, ಈ ನಕಲಿ ಮುಖಿಯರು ನಿಜವಾಗಿ ಮಡಿಕೇರಿ ಮೂಲದವರಲ್ಲ. ವಿಚಾರಣೆ ವೇಳೆ ಇವರು ಸುಮ್ಮನೆ ಮಡಿಕೇರಿ ಎಂದು ಹೇಳಿದ್ದಾರೆ. ಇವರು ಸ್ಥಳೀಯ ಬೆಳ್ತಂಗಡಿ ಮೂಲದವರು ಇರಬಹುದು. ಇವರ ಹೆಸರು ಗೋಪಿ ಕೂಡ ಅಲ್ಲ. ನಿಜಾಂಶ ತನಿಖೆಯಿಂದ ತಿಳಿದುಬರಬೇಕಿದೆ ಎಂದು ಹೇಳಿದ್ದಾರೆ.