ನವದೆಹಲಿ, ಅ05(SS): ಮೋದಿ ನೇತ್ರತ್ವದ ಬಿಜೆಪಿ ಸರ್ಕಾರದಿಂದ ಭಾರತ ಇಂದು ಹೊತ್ತಿ ಉರಿಯುತ್ತಿದೆ. ಸರ್ಕಾರ ಕೇವಲ ಮೇಕ್ ಇನ್ ಇಂಡಿಯಾ ಮತ್ತು ಕ್ಲೀನ್ ಇಂಡಿಯಾ ಬಗ್ಗೆ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ರಾಹುಲ್, ಬಿಜೆಪಿ ಸರ್ಕಾರ ಭಾರತವನ್ನು ಹೀಯಾಳಿಸುವುದು, ಭಾರತೀಯರ ವರ್ಚಸ್ಸನ್ನು ಹಾಳು ಮಾಡುತ್ತಿರುವುದನ್ನು ಇಂದು ನಾವು ನೋಡುತ್ತಿದ್ದೇವೆ. ಸ್ವಂತ ಜನರೊಂದಿಗೆಯೇ ಭಾರತ ಸರ್ಕಾರ ಯುದ್ಧ ನಡೆಸುತ್ತಿದೆ. 1.3 ಬಿಲಿಯನ್ ಜನರ ಮೇಲೆ ತನ್ನ ಒಂದು ಸಿದ್ಧಾಂತವನ್ನು ಹೇರುವ ಸಲುವಾಗಿ ಈ ರೀತಿ ವರ್ತಿಸುತ್ತಿದೆ ಎಂದು ಕಿಡಿ ಕಾರಿದರು.
ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಭಾರತೀಯರೊಂದಿಗೆ ಯುದ್ಧ ಮಾಡುತ್ತಿದ್ದು, ಭಾರತೀಯರ ಮೇಲೆ ಉಸಿರುಗಟ್ಟಿಸುವ ಸಿದ್ಧಾಂತಗಳನ್ನು ಹೇರುತ್ತಿದೆ ಎಂದು ಹೇಳಿದರು.
ಭಾರತದ ಆರ್ಥಿಕತೆ ನಾಶಗೊಳ್ಳುವಂತೆ ಮಾಡುವುದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವುದು, ರುಪಾಯಿ ಮೌಲ್ಯ ಕುಸಿಯುವಂತೆ ಮಾಡುವುದು, ಪೆಟ್ರೋಲ್ ಬೆರೆ ಏರಿಕೆ ಮಾಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ, ಹೊಸ ಆಲೋಚನೆಗಳಿಗೆ ಸ್ವಾಗತಗಳು ದೊರೆಯುತ್ತಿಲ್ಲ. ಹೊಸ ಆಲೋಚನೆಗಳನ್ನು ಬಿಡಿ, ಚಿಂತಕರನ್ನೇ ಅವರು ಇಷ್ಟ ಪಡುತ್ತಿಲ್ಲ. ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿವೆ. ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಇಂದು ಹೊರಗೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.