ತಿರುವನಂತಪುರ, ಅ05(SS): ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಎಲ್ಲೆಡೆ ಭಾರೀ ವಿವಾದ ಸೃಷ್ಟಿಯಾಗಿದೆ. ಮಾತ್ರವಲ್ಲ, ಶಬರಿಮಲೆ ಗಿರಿದೇಗುಲಕ್ಕೆ ಎಲ್ಲ ವಯೋಮಾನದ ಹೆಣ್ಮಕ್ಕಳ ಪ್ರವೇಶ ವಿಷಯದಲ್ಲಿ ಸುಪ್ರೀಂ ಕೋರ್ಟ್ ತಾಳಿರುವ ನಿರ್ಧಾರವನ್ನು ಬೆಂಬಲಿಸುವ ಕೇರಳ ರಾಜ್ಯ ಸರಕಾರದ ನಿಲುವನ್ನು ಬದಲಾಯಿಸಬೇಕೆಂಬ ಆಗ್ರಹಗಳು ಹೆಚ್ಚಾಗುತ್ತಿದೆ.
ಈ ನಡುವ ಅಯ್ಯಪ್ಪ ಸ್ವಾಮಿ ಚಿನ್ನಾಭರಣಗಳನ್ನು ನೋಡಿಕೊಳ್ಳುತ್ತಿರುವ ಪಂದಳ ರಾಜ ಮನೆತನದವರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿರುವ ಸುಳ್ಳು ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಶಬರಿಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಂದೇ ಒಂದು ಹೆಣ್ಣು ಒಳನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವುದಿಲ್ಲ. ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ. ಅದನ್ನ ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವುದಿಲ್ಲ. ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಪಂದಳ ಅರಮನೆ ಆಡಳಿತ ಮಂಡಳಿ ಅಧಿಕೃತವಾಗಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಪ್ರಕಟಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ವಿಚಾರಗಳು ಸತ್ಯಕ್ಕೆ ದೂರವಾದದ್ದು, ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅಯ್ಯಪ್ಪ ದೇಗುಲದ ಬಾಗಿಲು ಮುಚ್ಚಿದ ಬಳಿಕ ಆಭರಣಗಳು ಅರಮನೆಯಲ್ಲೇ ಇರುತ್ತವೆ. ಸಂಪ್ರದಾಯವನ್ನು ಮುರಿಯುವ ಪ್ರಶ್ನೆಯೇ ಇಲ್ಲ. ಪಂದಳ ರಾಜ ಮನೆತನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪಂದಳ ರಾಜ ಮನೆತನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.