ಬೆಂಗಳೂರು, ಅ ೦5(SM): ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನ ತನಕ ಬಗೆ ಹರೆಯದೇ ರೈತರಲ್ಲಿ ಮತ್ತೆ ಮತ್ತೆ ಗೊಂದಲವನ್ನುಂಟು ಮಾಡಿರುವ ಕೃಷಿ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯವೊಂದನ್ನು ನೀಡಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲಮನ್ನಾ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸಾಲಮನ್ನಾ ಅರ್ಜಿ ಭರ್ತಿಗೆ ಯಾವುದೇ ಕಾಲಮಿತಿ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಜ್ಯದ ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದ ಅರ್ಜಿ ಭರ್ತಿಗೆ ಯಾವುದೇ ಕಾಲಮಿತಿ ಹಾಕಿಲ್ಲ. ಈ ಬಗ್ಗೆ ರೈತರು ಗಾಬರಿ ಪಡುವ ಅಗತ್ಯವಿಲ್ಲ. ತರಾತುರಿ ಮಾಡದೆ, ನಿಧಾನವಾಗಿಯೇ ಸಾಲಮನ್ನಾ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಕಾಲಮಿತಿ ಹಾಕಿದ್ದಾರೆಂಬ ವದಂತಿಗಳಿಗೆ ರೈತರು ಕಿವಿಗೊಡಬೇಕಿಲ್ಲ ಎಂದ ಸಿಎಂ ರೈತರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಾಲಮನ್ನಾ ಹಣ ಮಧ್ಯವರ್ತಿಗಳ ಪಾಲಾಗಬಾರದು ಎಂಬುದು ನಮ್ಮ ಕಳಕಳಿ. ಹೀಗಾಗಿ ಸವಿವರ ಅರ್ಜಿ ಪಡೆದು ಅನುಕೂಲ ಮಾಡಿಕೊಳ್ಳುತ್ತಿದ್ದೇವೆ. ಋಣ ಮುಕ್ತ ಕಾಯ್ದೆ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಹಣಕಾಸು ಇಲಾಖೆಯಿಂದ ಎರಡು ಕ್ಲಾರಿಫಿಕೇಷನ್ ಕೇಳಿದ್ದರು. ಅದನ್ನು ಸಹ ಕಳುಹಿಸಿಕೊಟ್ಟಿದ್ದೇನೆ ಎಂದು ಹೇಳಿದರು. ರೈತರ ಎಲ್ಲಾ ಸಮಸ್ಯೆಗಳಿಗೆ ರಾಜ್ಯ ಸರಕಾರ ಸ್ಪಂಧಿಸುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಭಯಪಡುವ ಅಗತ್ಯ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.