ಬೆಂಗಳೂರು, ಅ 05(SM): 2014ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಜನಾರ್ದನ ಪೂಜಾರಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ.
ಪೂಜಾರಿ ವಿರುದ್ಧ ದ.ಕ. ಜಿಲ್ಲಾ ಜೆಎಂಎಫ್ ಸಿ ಕೋರ್ಟ್ ನಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಪೀಠ, ಅಕ್ಟೋಬರ್ 4ರಂದು ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭಿಸದೇ ಇದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ರದ್ದುಗೊಳಿಸಿದೆ.
ಜಿ ವಿ ರಾಜಶೇಖರ್ ಎಂಬವರು ಜನಾರ್ದನ ಪೂಜಾರಿಯವರು ನೀತಿ ಸಂಹಿತಿ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಅವರ ವಿರುದ್ಧ 2014ರ ಮಾರ್ಚ್ 26ರಂದು, ಹಿಂದಿನ ಲೋಕಸಭೆ ಚುನಾವಣೆ ಸಂದರ್ಭ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿತ್ತು. ಅದರಂತೆ ಪೊಲೀಸರು 2015ರ ಮಾರ್ಚ್ 2ರಂದು ಪೂಜಾರಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿಕೊಂಡಿದ್ದರು.
ಇದನ್ನು ಪ್ರಶ್ನಿಸಿ ಹಾಗೂ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಜನಾರ್ದನ ಪೂಜಾರಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ದೂರಿನ ಪರವಾಗಿ ಯಾವುದೇ ಸಾಕ್ಷಾಧಾರಗಳಿಲ್ಲದ ಕಾರಣ ಪ್ರಕರಣವನ್ನು ರದ್ದುಗೊಳಿಸಿದೆ. ಇದೀಗ ಪೂಜಾರಿ ನಿರಾಳರಾಗಿದ್ದಾರೆ.