ಕಾಸರಗೋಡು, ಅ 05(SM): ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಗಾಳಿ ಮಳೆ ಸುರಿಯುವ ಸಾಧ್ಯತೆ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ರಾಜ್ಯ ದುರಂತ ನಿವಾರಣಾ ಪ್ರಾಧಿಕಾರದ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಮುಂಜಾಗ್ರತೆಯಾಗಿ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಚರ್ಚಿಸಲಾಯಿತು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಮುಂಜಾಗ್ರತಾ ನಿರ್ದೇಶನಗಳನ್ನು ರವಾನಿಸಲಾಯಿತು.
ವೆಳ್ಳರಿಕುಂಡು, ಚಿತ್ತಾರಿಕ್ಕಾಲ್, ರಾಜಾಪುರ ಮೊದಲಾದ ಮಲೆನಾಡು ಪ್ರದೇಶಗಳಲ್ಲಿ ನಿಗಾವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರ ನೇತೃತ್ವದಲ್ಲಿ ಹತ್ತು ಜನರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ೨೪ ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ.
ಪ್ರಮುಖ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ವ್ಯವಸ್ಥೆ, ಅಂಬ್ಯುಲೆನ್ಸ್ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅಗ್ನಿಶಾಮಕ ದಳವನ್ನು ಪೂರ್ಣ ವ್ಯವಸ್ಥೆಯೊಂದಿಗೆ ಸಜ್ಜುಗೊಳಿಸಲಾಗಿದೆ. ಕರಾವಳಿ ಪೊಲೀಸ್ ಪಡೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಮೀನುಗಾರಿಕೆಗೆ ತೆರಳಿದ ಎಲ್ಲಾ ಬೋಟ್ ಗಳು ಕೂಡಲೇ ಹಿಂತಿರುಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಜಿತ್ ಬಾಬು ತಿಳಿಸಿದರು.
ಸಂತ್ರಸ್ಥ, ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಗ್ಗೆ ಆಯಾ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಮೀನುಗಾರಿಕಾ ಉಪ ನಿರ್ದೇಶಕರ ಕಚೇರಿಯಲ್ಲಿ ೨೪ ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ. ಮೀನುಗಾರಿಕೆಗೆ ನಿರ್ಬಂಧ ಹೇರಿರುವುದರಿಂದ ಮೀನುಗಾರರಿಗೆ ಕಾರ್ಡ್ ವೊಂದಕ್ಕೆ ಒಂದು ರೂಪಾಯಿ ದರದಲ್ಲಿ ಐದು ಕಿಲೋ ಪಡಿತರ ಅಕ್ಕಿ ಪಡಿತರ ಅಂಗಡಿಗಳ ಮೂಲಕ ವಿತರಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ತಾತ್ಕಾಲಿಕ ರಕ್ಷಾ ಕೇಂದ್ರವನ್ನು ತೆರೆಯುವಂತೆ ಎಲ್ಲಾ ಗ್ರಾಮಾಧಿಕಾರಿಗಳಿಗೆ ಆದೇಶವನ್ನು ಕೂಡ ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ತುರ್ತು ಸಂದರ್ಭದಲ್ಲಿ ಸಂಪರ್ಕ ಸಂಖ್ಯೆ:
ದುರಂತ ನಡೆದಲ್ಲಿ ಕೂಡಲೇ 04994-257700, 9446601700 ನಂಬ್ರವನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.