ಉಡುಪಿ, ಅ 05(SM): ಜಿಲ್ಲೆಯ ಎಲ್ಲಾ ಖಾಸಗಿ ಅಸ್ಪತ್ರೆಗಳು ಒದಗಿಸುವ ಚಿಕಿತ್ಸೆಗಳ ದರಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಆಸ್ಪತ್ರೆಯಲ್ಲಿ ನಮೂದಿಸಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗಧಿಪಡಿಸಿದ ದರಗಳನ್ನು ಸಾರ್ವಜನಿರಿಗೆ ಕಾಣುವಂತೆ ಪ್ರದರ್ಶಿಸುವಂತೆ ಆದೇಶಿಸಿದ್ದರೂ ಕೂಡ ಹಲವು ಆಸ್ಪತ್ರೆಗಳಲ್ಲಿ, ಸಾರ್ವಜನಿರಿಗೆ ಕಾಣದಂತೆ ಅಸ್ಪತ್ರೆಯ ಯಾವುದೋ ಮೂಲೆಯಲ್ಲಿ ಅಳವಡಿಸಲಾಗಿದೆ. ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ ಈ ಹಿಂದೆ ನಮೂದಿಸಿದ್ದ ದರಗಳೇ ಇದ್ದು, ಪ್ರಸ್ತುತ ಇರುವ ದರಗಳನ್ನು ನಮೂದಿಸಿಲ್ಲ. ಆದ್ದರಿಂದ ಎಲ್ಲಾ ಆಸ್ಪತ್ರೆಗಳು ತಮ್ಮ ಇತ್ತೀಚಿನ ಚಿಕಿತ್ಸೆಯ ದರಗಳನ್ನು ಸ್ಪಷ್ಟವಾಗಿ ಕಾಣುವಂತೆ ನಮೂದಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಆಸ್ಪತ್ರೆಗಳು ತಮ್ಮ ವೈದ್ಯಕೀಯ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ದರ ಪ್ರದರ್ಶನದ ಕುರಿತು ಛಾಯಾಚಿತ್ರಗಳನ್ನು ಪಡೆದು ನವೀಕರಣ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ನವಜಾತ ಶಿಶು ಮರಣ ತಪ್ಪಿಸುವ ಉದ್ದೇಶದಿಂದ, ಮಗು ಜನನದ ನಂತರ ತೆಗೆದುಕೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಬಾಣಂತಿಯರಿಗೆ ವಾರ್ಡ್ ಗಳಲ್ಲಿಯೇ ಕಡ್ಡಾಯವಾಗಿ ತರಬೇತಿ ನೀಡಿ ಎಂದು ಎಲ್ಲಾ ವೈದ್ಯರಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಂಡೋ ಸಂತ್ರಸ್ಥರಿಗೆ ಸೇನಾಪುರದಲ್ಲಿ ಈಗಾಗಲೇ ಜಮೀನು ಕಾಯ್ದಿರಿಸಿದ್ದು, ಈ ಜಮೀನನ್ನು ಆರೋಗ್ಯ ಇಲಾಖೆ ಬೇಲಿ ಹಾಕಿ ಗಡಿ ಗುರುತು ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸಭೆಯಲ್ಲಿ ಡಿಹೆಚ್ ಓ ಡಾ. ರೋಹಿಣಿ ಹಾಗೂ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.