ಉಡುಪಿ, ಅ06(SS): ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಾಲಯಕ್ಕೆ ತಮಿಳುನಾಡಿನ ಭಕ್ತರೊಬ್ಬರು ಚಿನ್ನದ ಖಡ್ಗವನ್ನು ಹರಕೆ ರೂಪದಲ್ಲಿ ಸಮರ್ಪಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಮೂಲದ ಡಾ.ನಳಿನ್ ವಿಮಲ್ ಕುಮಾರ್ ಎಂಬುವವರು ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಕೆಲದಿನಗಳ ಹಿಂದೆ ಹರಕೆ ಹೊತ್ತುಕೊಂಡಿದ್ದರು. ದೇವಾಲಯದಲ್ಲಿ ಪ್ರಾರ್ಥಿಸಿದ ಬೇಡಿಕೆಯೊಂದು ನಿರ್ವಿಘ್ನವಾಗಿ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಅವರು 1 ಕೆಜಿ ತೂಕದ ಚಿನ್ನಡ ಖಡ್ಗವನ್ನು ಮೂಕಾಂಬಿಕೆಗೆ ಸಮರ್ಪಿಸಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಚಿನ್ನದ ಖಡ್ಗವನ್ನು ಹಸ್ತಾಂತರಿಸಿದ್ದು, ಸದ್ಯ 30 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಖಡ್ಗವನ್ನು ದೇವಾಲಯದ ಲಾಕರ್ನಲ್ಲಿ ಇಡಲಾಗಿದೆ. ಕೊಲ್ಲೂರು ಮೂಕಾಂಬಿಕೆಗೆ ಈವರೆಗೆ 5ಕ್ಕೂ ಹೆಚ್ಚು ಚಿನ್ನದ ದೊಡ್ಡ ಖಡ್ಗ, ಹತ್ತಾರು ಚಿನ್ನದ ಸಣ್ಣ ಖಡ್ಗ, 200ಕ್ಕೂ ಹೆಚ್ಚು ಬೆಳ್ಳಿ ಖಡ್ಗಗಳು ಹರಕೆ ರೂಪದಲ್ಲಿ ಬಂದಿವೆ ಎಂದು ದೇವಾಲಯದ ಮೂಲಗಳು ತಿಳಿಸಿದೆ.