ಸುಪ್ರೀತಾ ಸಾಲ್ಯಾನ್, ಪಡು
ಶ್ರೀ ಕ್ಷೇತ್ರ ಪಣೋಲಿಬೈಲು ಎಂಬ ಹೆಸರನ್ನು ಕೇಳದೆ ಇರುವವರು ತೀರಾ ವಿರಳ. ಈ ಕ್ಷೇತ್ರದ ಹೆಸರಿನಲ್ಲೇ ಒಂದು ರೀತಿಯ ಭಯ ಭಕ್ತಿ. ಇದು ಕರಾವಳಿಯ ಅತ್ಯಂತ ಕಾರಣೀಕದ ದೈವಸ್ಥಾನ ಎಂಬುವುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರದಲ್ಲಿ ಪ್ರಧಾನ ದೈವಗಳಾಗಿ ಕಲ್ಲುರ್ಟಿ ಕಲ್ಕುಡ ನೆಲೆಯಾಗಿ ಸದ್ಭಕ್ತರನ್ನು ಪೊರೆಯುತ್ತಿದ್ದಾರೆ.
ಕ್ಷೇತ್ರದ ಕಲ್ಲುರ್ಟಿ ಕಲ್ಕುಡರ ದರ್ಶನ ಪಡೆದು ಅಪೂರ್ವ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕಾದರೆ ಬಿ.ಸಿ ರೋಡ್ ಸಮೀಪದ ಮೆಲ್ಕಾರ್ನಿಂದ ಮಾರ್ನಬೈಲು ಮಾರ್ಗವಾಗಿ 4 ಕಿ.ಮೀ ಪ್ರಯಾಣಿಸಬೇಕು. ಹಿಂದೆ ಈ ಪ್ರದೇಶದಲ್ಲಿ ಹೇರಳವಾಗಿ ಪನೆಯ ಮರಗಳು ಹಬ್ಬಿಕೊಂಡಿತ್ತು. ಇದೇ ಕಾರಣದಿಂದ ಈ ಊರಿಗೆ ಪಣೋಲಿಬೈಲು ಎಂದು ಹೆಸರಾಯಿತು ಎಂಬ ಪ್ರತೀತಿ ಇದೆ.
ಶ್ರೀ ಕ್ಷೇತ್ರ ಪಣೋಲಿಬೈಲು 400ಕ್ಕೂ ಹೆಚ್ಚು ವರ್ಷಗಳ ಪೌರಾಣಿಕ ಕಥೆಯಿರುವ ಹಳೆಯ ದೇವಸ್ಥಾನ. ಉಪ್ಪಿನಂಗಡಿಯ ವೈಲಾಯ ಎಂಬ ವಿದ್ವಾಂಸಕನ ಕುಲ ದೇವರಾಗಿ ಬೆಳಗಿದ ಕಲ್ಲುರ್ಟಿ ಕಲ್ಕುಡರೆಂಬ ದೈವ ಶಕ್ತಿಗಳು ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ನೆಲೆಯಾದರು ಎಂಬುವುದು ಇಲ್ಲಿನ ಚಾರಿತ್ರ್ಯ.
ಕಲ್ಲುರ್ಟಿ ಕಲ್ಕುಡ ದೈವಗಳು ಪಣೋಲಿಬೈಲಿಗೆ ಬರುವ ಮೊದಲು ಬಂಟ್ವಾಳದ ಸಜೀಪ ಎಂಬ ಊರಿಗೆ ಭೇಟಿ ಮಾಡುತ್ತಾರೆ. ಅ ಊರಿನ ಅಧಿಕಾರ ದೈವಗಳು ನಾಲ್ಕೈತ್ತಾಯ, ನಡಿಯೇಳು ದೈಯಂಗುಳ ಮತ್ತು ಉಳ್ಳಾಲ್ದಿ ಅಮ್ಮ. ಮಿತ್ತಮಜಲು ಎಂಬಲ್ಲಿ ಈ ದೈವಗಳ ನೇಮ ನಡೆಯುತ್ತಿರುವಾಗ ಕಲ್ಲುರ್ಟಿಯು ಅದೇ ಊರಿನ ಕುಲಾಲ ವಂಶದ ವ್ಯಕ್ತಿಯ ಮೇಲೆ ಆವೇಶಭರಿತಳಾಗಿ ಬಂದು ನೆಲೆಯಾಗಲು ಜಾಗವನ್ನು ಕೇಳುತ್ತಾಳೆ. ಆಗ ಅಲ್ಲಿನ ಗುರಿಕಾರ ಜಾಗ ಕೊಡಲು ನಿರಾಕರಿಸುತ್ತಾನೆ. ಕೋಪಗೊಂಡ ಕಲ್ಲುರ್ಟಿ, ದೈವಂಗುಳ ದೈವದ ಸಿರಿಮುಡಿಗೆ ಬೆಂಕಿ ಹಾಕುತ್ತಾಳೆ. ಹೀಗೆ ಕಲ್ಲುರ್ಟಿಯು ಶಕ್ತಿಯನ್ನು ತೋರಿಸಿ ಆಕೆ ಯಾರೆಂದು ಗುರಿಕಾರನಿಗೆ ತಿಳಿಸುತ್ತಾಳೆ. ಕಲ್ಲುರ್ಟಿಯ ಮಹಿಮೆಯನ್ನು ಅರಿತ ಸಜೀಪ ಮಾಗಣೆಯ ದೈವಗಳು ಕಲ್ಲುರ್ಟಿಯ ಜೊತೆ ಒಪ್ಪಂದ ಮಾಡಿಕೊಂಡು ನೆಲೆಯಾಗಲು ಜಾಗ ಕಲ್ಪಿಸುತ್ತದೆ. ಅಲ್ಲಿಯೇ ಪಕ್ಕದಲ್ಲಿನ ಕಲ್ಲಲ್ಲಿ ಕಲ್ಲುರ್ಟಿ ನೆಲೆಯಾಗುತ್ತಾಳೆ. ಒಂದು ದಿನ ಕುಲಾಲ ವಂಶಕ್ಕೆ ಸೇರಿದ ಗುಡ್ಡ ಮೂಲ್ಯನು ಕಲ್ಲುರ್ಟಿ ನೆಲೆಯಾದ ಆ ಕಲ್ಲನ್ನು ಹೊತ್ತುಕೊಂಡು ಸಂಚಾರ ಆರಂಭಿಸುತ್ತಾನೆ. ಆಯಾಸದಿಂದ ಬಳಲಿದ ಆತ ಕಲ್ಲನ್ನು ಕೆಳಗಿಡುತ್ತಾನೆ. ಕಲ್ಲು ಕೆಳಗಿಟ್ಟ ಅ ಜಾಗ ಈಗ ನೆಲೆಯಾಗಿರುವ ಪಣೋಲಿಬೈಲು. ಆಯಾಸ ನೀಗಿದ ನಂತರ ಗುಡ್ಡ ಮೂಲ್ಯನು ಕಲ್ಲನ್ನು ಎತ್ತಲು ಪ್ರಯತ್ನಿಸಿದಾಗ ಕಲ್ಲನ್ನು ಮೇಲೆತ್ತಲು ಆಗುವುದಿಲ್ಲ. ಕಲ್ಲು ಅಲ್ಲಿಯೇ ಸ್ಥಿರವಾಗುತ್ತದೆ. ಮುಂದೆ ಅ ಜಾಗ ಕಲ್ಲುರ್ಟಿ ಕಲ್ಕುಡರ ಪುಣ್ಯ ಕ್ಷೇತ್ರ ಪಣೋಲಿಬೈಲು ಎಂದು ಪ್ರಸಿದ್ಧಿಯಾಗುತ್ತದೆ.
ಪಣೋಲಿಬೈಲಿನ ತಾಯಿ ಕಲ್ಲುರ್ಟಿ ಎಂದು ಹೆಸರೆತ್ತಿದರೆ ಸಾಕು ತಾಯಿ ಒಲಿದೇ ಬಿಡುತ್ತಾಳೆ. ಮನಸಾರೆ ತಾಯಿಯನ್ನು ನೆನೆದು ಕಷ್ಟವನ್ನು ಆಕೆಯಲ್ಲಿ ಹೇಳಿಕೊಂಡ ಅದೇಷ್ಟೋ ಭಕ್ತರ ಮನದ ಅಭಿಲಾಷೆಗಳು ಈಡೇರಿದ ನಿದರ್ಶನಗಳೂ ಇವೆ. ಇದಕ್ಕೆ ಸಾಕ್ಷಿ ಶ್ರೀ ಕ್ಷೇತ್ರಕ್ಕೆ ಬರುವ ಹರಕೆ.
ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆ ಅಗೇಲು. ಇದು ತಾಯಿ ಕಲ್ಲುರ್ಟಿಗೆ ಪ್ರೀತಿಯ ಸೇವೆ. ಎನೇ ಕಷ್ಟ ಬಂದರೂ ಪಣೋಲಿಬೈಲಿನ ತಾಯಿ ಕಲ್ಲುರ್ಟಿಗೊಂದು ಅಗೇಲು ಕೊಡುತ್ತೇವೆ ಎನ್ನುವ ಮಾತು ಇವತ್ತಿಗೂ ತುಳುವರಲ್ಲಿದೆ. ವಾರದಲ್ಲಿ 5000ಕ್ಕೂ ಮಿಕ್ಕಿ ಈ ಕ್ಷೇತ್ರಕ್ಕೆ ಹರಕೆ ಬರುವುದೇ ಇದಕ್ಕೆ ಸಾಕ್ಷಿ. ಜೊತೆಗೆ ಕ್ಷೇತ್ರದಲ್ಲಿ ಹರಕೆಯ ಕೋಲವೂ ನಡೆಯುತ್ತದೆ. ಇಷ್ಟೇ ಅಲ್ಲದೇ ಪಟ್ಟೆ ಸಾರಿ, ಬೆಳ್ಳಿ ಬಂಗಾರವೂ ಹರಕೆಯ ರೂಪದಲ್ಲಿ ಬರುತ್ತಲೇ ಇರುತ್ತದೆ. ದಿನ ಹೋದಂತೆ ಕ್ಷೇತ್ರಕ್ಕೆ ಹರಕೆ ಹೆಚ್ಚಾಗುತ್ತಲೇ ಹೋಗುವುದು ಇಲ್ಲಿನ ಮಹಿಮೆಯನ್ನು ಎತ್ತಿ ತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದ ಜನರು ಕ್ಷೇತ್ರಕ್ಕೆ ಹರಕೆ ಒಪ್ಪಿಸಿ ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸತ್ಯ ಧರ್ಮವನ್ನು ಕಾಪಾಡಿಕೊಂಡು ನಂಬಿದ ಭಕ್ತರನ್ನು ಕೈಹಿಡಿದು ತನ್ನ ಸೆರಗಿನಲ್ಲಿ ಆಸರೆ ನೀಡುತ್ತಿರುವ ತಾಯಿಯ ದರ್ಶನಕ್ಕೆ ಪ್ರತೀ ದಿನ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬರುತ್ತದೆ. ಈ ಕ್ಷೇತ್ರದ ಕಾರಣೀಕ, ಶಕ್ತಿಯ ಅರಿವಾಗಬೇಕಾದರೆ ಒಮ್ಮೆ ಶ್ರೀ ಕ್ಷೇತ್ರ ಪಣೋಲಿಬೈಲಿಗೆ ಭೇಟಿ ನೀಡಲೇ ಬೇಕು...