ಕಾಸರಗೋಡು, ಅ 06(SM): ನ್ಯಾಯಾಲಯಗಳಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಗಮನ ನೀಡಬೇಕು. ಜನರಿಗೆ ಕಡಿಮೆ ವೆಚ್ಚದಲ್ಲಿ ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದು ಕೇರಳ ರಾಜ್ಯಪಾಲ ಪಿ. ಸದಾಶಿವಂ ಅಭಿಪ್ರಾಯಪಟ್ಟಿದ್ದಾರೆ.
ಅವರು ಶನಿವಾರ ಕಾಸರಗೋಡು ಉಪ ನ್ಯಾಯಾಲಯದ ವಜ್ರಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯಾಲಯದಲ್ಲಿ ವರ್ಷಗಳಿಂದ ತೀರ್ಪು ಕಲ್ಪಿಸದೆ ಪ್ರಕರಣಗಳು ರಾಶಿ ಬಿದ್ದಿವೆ. ಇದರಿಂದ ಅದಾಲತ್ ಗಳನ್ನು ನಡೆಸಬೇಕು. ನ್ಯಾಯಾಲಯದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಮುಂದೆ ಬರಬೇಕು ಎಂದು ಅವರು ಹೇಳಿದರು.
ಕಾಸರಗೋಡಿನಲ್ಲಿ ಕುಟುಂಬ ನ್ಯಾಯಾಲಯ ಮತ್ತು ಎಂ.ಎ.ಸಿ.ಟಿ ನ್ಯಾಯಾಲಯ ಸ್ಥಾಪಿಸಲು ಮುಂದಾಗಬೇಕು ಎಂದರು. ನ್ಯಾಯಾಲಯ ಸಮುಚ್ಚಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ರಿಷಿಕೇಶ್ ರೋಯ್ ಅಧ್ಯಕ್ಷತೆ ವಹಿಸಿದ್ದರು.
ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್, ಹೈಕೋರ್ಟ್ ನ್ಯಾಯಾಧೀಶ ಅಲೆಕ್ಸಾಂಡರ್ ಥೋಮಸ್, ಶಾಸಕ ಎನ್.ಎ. ನೆಲ್ಲಿಕುನ್ನು, ಜಿಲ್ಲಾ ನ್ಯಾಯಾಧೀಶ ಎನ್. ಮನೋಹರ ಕಿಣಿ, ಬಾರ್ ಅಸೋಶಿಯೇಶನ್ ಅಧ್ಯಕ್ಷ ನ್ಯಾಯವಾದಿ ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.