ಮಂಗಳೂರು, ಅ 7 (MSP): ಪೇಟಾ ಸಂಸ್ಥೆಯೂ ಕಂಬಳ ಕ್ರೀಡೆಯ ವಿರುದ್ದ ಸುಪ್ರೀಂ ಕೋರ್ಟ್ ನಲ್ಲಿ ಹೊಸದಾಗಿ ಸಲ್ಲಿಸಿರುವ ಅರ್ಜಿಯ ವಿರುದ್ದ ಸಮರ್ಥವಾಗಿ ಕಾನೂನು ಹೋರಾಟ ನಡೆಸಲು ಕರಾವಳಿಯ ಕಂಬಳ ಸಮಿತಿ ಕೂಡಾ ಸಿದ್ದಗೊಂಡಿದೆ. ಕಂಬಳ ಕ್ರೀಡೆಯ ಸಂದರ್ಭದಲ್ಲಿ ಹಿಡಿಯುವ ಬೆತ್ತವನ್ನು ಕಂಬಳ ಸಮಿತಿ ಪರಿಷ್ಕರಿಸಿ ಹೊಸ ರೀತಿಯಲ್ಲಿ ಸಿದ್ದಪಡಿಸಿದೆ.ಹೊಡೆದರೂ ಕೋಣಗಳಿಗೆ ನೋವಾಗದಂತೆ ವಿನ್ಯಾಸಗೊಳಿಸಲಾಗಿದೆ.
ಪೇಟಾದಿಂದ ಬಾರುಕೋಲಿನ ಬಗ್ಗೆ ಆಕ್ಷೇಪ ಎತ್ತಲಾಗಿದ್ದು, ಇದನ್ನು ನಿವಾರಿಸಲು ಕಂಬಳ ಸಮಿತಿಯಿಂದ ಪರ್ಯಾಯ ಬಾರುಕೋಲು ಸಿದ್ಧಪಡಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ, ಉಡುಪಿ ಕಂಬಳ ಸಮಿತಿ ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.
ಬಾರುಕೋಲಿನ ಬೆತ್ತದ ತುದಿಯಲ್ಲಿ ಎರಡು ಕಡೆ ಸುಮಾರು 2 ಇಂಚು ಅಗಲ, ಅರ್ಧ ಅಡಿ ಉದ್ದದ ಫೋಮ್ ಹೊದಿಕೆಯನ್ನು ಜೋಡಿಸಲಾಗಿದೆ. ಹೀಗಾಗಿ ಹೊಡೆದರೂ ಕೋಣಗಳಿಗೆ ನೋವಾಗದು. ಪ್ರಸ್ತುತ ಕಂಬಳದಲ್ಲಿ ಬೆತ್ತವನ್ನು ಸಾಂಕೇತಿಕವಾಗಿ ಬಳಸಲಾಗುತ್ತದೆ. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಗೆ ಹೊಸ ವಿನ್ಯಾಸದ ಬೆತ್ತವನ್ನು ಪರಿಶೀಲನೆಗೆ ಹಾಜರುಪಡಿಸಲಾಗುವುದು ಎಂದರು.