ಕುಂದಾಪುರ, ಅ 07(SM): ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಯಿಂದ ಪರಾರಿಯಾದ ವಿಚಾರಣಾಧೀನ ಕೈದಿ ಬೈಂದೂರು ತಾಲೂಕು ವ್ಯಾಪ್ತಿಯ ಅರೆಶಿರೂರು ಗೋಳಿಹೊಳೆಯ ನಿವಾಸಿ ಸುರೇಶ್ ನಾಯ್ಕ(26) ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ತೀವ್ರಗೊಳಿಸಿದ್ದಾರೆ.
ವಿಚಾರಣಾಧೀನ ಕೈದಿ ಪರಾರಿಯಾಗಿ ಒಂದು ದಿನ ಕಳೆದರೂ ಆತನ ಸುಳಿವು ಲಭ್ಯವಾಗಿಲ್ಲ. ವಿಶೇಷ ತಂಡದಿಂದ ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಶೀಘ್ರವೇ ಆತನನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇನ್ನು ಆರೋಪಿ ಸುರೇಶ್ ನಾಯ್ಕ ಪೋಕ್ಸೊ ಕಾಯ್ದೆಯಡಿ ಬಂಧಿತವಾಗಿ ಕಾರವಾರ ಜೈಲಿನಲ್ಲಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಕಾರವಾರ ಜೈಲಿಗೆ ಹಸ್ತಾಂತರಿಸಲಾಗಿತ್ತು. ವಿಚಾರಣೆ ಹಿನ್ನೆಲೆಯಲ್ಲಿ ಕುಂದಾಪುರ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿ ಪೊಲೀಸರು ಮತ್ತೆ ಕಾರವಾರಕ್ಕೆ ಕುಂದಾಪುರದಿಂದ ಮತ್ಸಗಂಧ ಎಕ್ಸ್ ಪ್ರೆಸ್ ರೈಲಿನ ಮೂಲಕ ಆತನನ್ನು ಕರೆದೊಯ್ಯುತ್ತಿದ್ದರು.
ಈ ಸಂದರ್ಭ ಮಾರ್ಗ ಮಧ್ಯೆ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಬೆಂಗಾವಲು ಪೊಲೀಸ್ ಸಿಬ್ಬಂದಿಯವರಿಂದ ತಪ್ಪಿಸಿಕೊಂಡು ಸುರೇಶ್ ನಾಯ್ಕ ಪರಾರಿಯಾಗಿದ್ದಾನೆ. ಇದೀಗ ಪರಾರಿಯಾದ ವಿಚಾರಣಾಧೀನ ಕೈದಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.