ಬೆಂಗಳೂರು,ಅ 8 (MSP): ರಾಜ್ಯದ ನ್ಯಾಯಾಂಗ ಇಲಾಖೆಯಲ್ಲಿ ಖಾಲಿಯಿರುವ 33 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ದಾಖಲೆ ಎಂಬಂತೆ 20 ಮಹಿಳೆಯರು ಈ ಹುದ್ದೆಗೆ ನೇಮಕಗೊಂಡಿದ್ದು, ಉಳಿದ 13 ಹುದ್ದೆಗಳಲ್ಲಿ ಮಾತ್ರ ಆಯ್ಕೆಯಾಗಿದ್ದಾರೆ. ಆಯ್ಕೆಯಾದ 20 ಮಹಿಳೆಯರಲ್ಲಿ ಅತ್ಯಂತ ಕಿರಿಯ ವಯಸ್ಸಿನ ಯುವತಿಯೊಬ್ಬರಿದ್ದಾರೆ.
ವಿಜಯಪುರದ ಇಂಡಿ ತಾಲೂಕಿನ ನಂದರಗಿ ಗ್ರಾಮದ ಚೈತ್ರಾ ವಿ. ಕುಲಕರ್ಣಿ ಈ ಸಾಧನೆ ಮಾಡಿದವರು. ಇವರು ಕೇವಲ ತಮ್ಮ 26ನೇ ವಯಸ್ಸಿನಲ್ಲಿ ನ್ಯಾಯಾಧೀಶೆಯ ಹುದ್ದೆ ಅಲಂಕರಿಸಲಿದ್ದಾರೆ. ಚೈತ್ರಾ ಪ್ರಸ್ತುತ ಬಾಗಲಕೋಟೆಯಲ್ಲಿ ವಾಸವಾಗಿದ್ದು ಬಿಎ, ಎಲ್ಎಲ್ಬಿ ಹಾಗೂ ಎಲ್ಎಲ್ಎಂ ಬಳಿಕ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಲೇ ಅತ್ಯಂತ ಕಿರಿಯ ವಯಸ್ಸಿನಲ್ಲೇ ದಿವಾಣಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. ಇವರ ತಂದೆ ಡಾ. ವಸಂತ ಕುಲಕರ್ಣಿ ನಗರದ ಸಬಲಾ ಸಂಸ್ಥೆಯ ನಿರ್ದೇಶಕ ಹಾಗೂ ಬಾಗಲಕೋಟೆ ಎಸ್ಆರ್ಎನ್ ಕಲಾ ಮತ್ತು ಎಂಬಿಎಸ್ ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕರಾಗಿದ್ದಾರೆ.
ಕರ್ನಾಟಕ ಹೈಕೋರ್ಟ್ ನ್ಯಾಯಾಂಗ ಇಲಾಖೆಯಲ್ಲಿ ಖಾಲಿಯಿರುವ 33 ನ್ಯಾಯಾಧೀಶೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿತ್ತು. ಇದಕ್ಕೆ ಚೈತ್ರಾ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ನಲ್ಲಿ ನಡೆದ ಪ್ರಿಲಿಮ್ಸ್ ಪರೀಕ್ಷೆ ಬರೆದು ನಂತರ ಜುಲೈನಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಬಳಿಕ ಸೆ.19ರಂದು ನಡೆದ 86ಅಭ್ಯರ್ಥಿಗಳ ಸಂದರ್ಶನದಲ್ಲಿ 33 ಮಂದಿ ಆಯ್ಕೆಯಾಗಿದ್ದು ಇದರಲ್ಲಿಯೂ ತೇರ್ಗಡೆಯಾಗುವ ಮೂಲಕ ದಿವಾಣಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. ನ್ಯಾಯಾಧೀಶೆ ಹುದ್ದೆಗೆ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ 946 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. . ಸದ್ಯ ಚೈತ್ರಾ ವಿ. ಕುಲಕರ್ಣಿ ಸೇರಿದಂತೆ ಇತರ ಅಭ್ಯರ್ಥಿಗಳು ಸ್ಥಳ ಆದೇಶಕ್ಕೆ ಕಾಯುತ್ತಿದ್ದಾರೆ.