ಉಡುಪಿ, ಅ 08 (MSP): ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನ.3ರಂದು ಉಪಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ , ಅ.6ರಿಂದ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಉಡುಪಿ ಜಿಲ್ಲಾದ್ಯಂತ ನೀತಿ ಸಂಹಿತೆ ತಕ್ಷಣದಿಂದ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅ.16 ಕೊನೇ ದಿನವಾಗಿದ್ದು, ಅ.17ಕ್ಕೆ ನಾಮಪತ್ರ ಪರಿಶೀಲನೆ ಮತ್ತು ಅ.20ಕ್ಕೆ ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ನ.6ಕ್ಕೆ ಮತ ಎಣಿಕೆ ನಡೆಯಲಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆ ನ.8ರವರೆಗೆ ಉಡುಪಿ ಜಿಲ್ಲಾದ್ಯಂತ ಜಾರಿಯಲ್ಲಿರುತ್ತದೆ ಎಂದು ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಮತಿ ಇಲ್ಲದ ಕಟೌಟ್ಗಳನ್ನು ತೆರವುಗೊಳಿಸಲಾಗುವುದು. ಜತೆಗೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡಬಾರದು. ಸರಕಾರಿ ಕಾರ್ಯಕ್ರಮಗಳ ಕಟೌಟ್ ಗಳನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ
ನೀತಿ ಸಂಹಿತೆಯಿಂದ ನವರಾತ್ರಿ ಉತ್ಸವ ಹಾಗೂ ನವರಾತ್ರಿ ಕಾರ್ಯಕ್ರಮಗಳ ಫ್ಲೆಕ್ಸ್ ಹಾಕಲು ರಿಯಾಯಿತಿ ನೀಡಲಾಗಿದ್ದು, ಬ್ಯಾನರ್ ಗಳಲ್ಲಿ ರಾಜಕೀಯ ಪಕ್ಷಗಳ ನಾಯಕರ ಹೆಸರಿದ್ದರೆ ಅಳವಡಿಸಲು ಪರವಾನಿಗೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.