ಸುಳ್ಯ, ಅ 08(SM): ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಗಳೆಲ್ಲ ಸುಳ್ಳಾಗಿದೆ. ಕೇಂದ್ರ ಸರಕಾರದ ವೈಫಲ್ಯಗಳನ್ನು, ಬೆಲೆ ಏರಿಕೆಗಳ ವಿಷಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ತೈಲ ಬೆಲೆ, ಗ್ಯಾಸ್ ಬೆಲೆ, ಜನುಪಯೋಗಿ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮನ್ ಕೀ ಬಾತ್ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಒಂದು ಕಚ್ಚಾ ತೈಲ ಬ್ಯಾರೆಲ್ಗೆ 140 ಡಾಲರ್ ಇರುವಾಗಲೂ ಪೆಟ್ರೋಲ್ ಡಿಸೇಲ್ ನಿಯಂತ್ರಣದಲ್ಲಿತ್ತು. ಆದರೆ ಈಗ ಕೇಂದ್ರ ಸರಕಾರ ತೈಲ ಬೆಲೆ ಏರಿಕೆ ನಮ್ಮ ಕೈಯಲ್ಲಿ ಇಲ್ಲ ಎನ್ನುವ ಹೇಳಿಕೆ ನೀಡುತ್ತಿದ್ದಾರೆ.
ಆಡಳಿತ ನಡೆಸಲು ಕೇಂದ್ರದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಕಾಂಗ್ರೆಸ್ ಪಕ್ಷದಿಂದ ಆಗಬೇಕು. ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದರು.