ಸುಳ್ಯ, ಅ 08(SM): ತಾಲೂಕಿನ ಗಾಂಧಿನಗರದ ಗುರುಂಪು ಇಂಡಸ್ಟ್ರೀಯಲ್ ಎಂಬಲ್ಲಿ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ದೊಡ್ಡತೋಟ ಸಮೀಪದ ಕಂದಡ್ಕ ನಿವಾಸಿ ನಾಗರಾಜ್(18) ಮೃತ ಯುವಕ.
ನಾಗರಾಜ್ ಗಾಂಧಿನಗರದ ನವೀನ್ಕುಮಾರ್ ಮಾಲಕತ್ವದ ಶ್ರೀದುರ್ಗಾ ಇಂಡಸ್ಟ್ರೀಯಲ್ನಲ್ಲಿ ಉದ್ಯೋಗಿಯಾಗಿದ್ದ. ಈತ ಎಂದಿನಂತೆ ಬೆಳಿಗ್ಗೆ ೯ ಗಂಟೆ ಹೊತ್ತಿಗೆ ಇಂಡಸ್ಟ್ರೀಯಲ್ಗೆ ತೆರಳಿ ಕೆಲಸ ಪ್ರಾರಂಭಿಸಿದ್ದ. ಆದರೆ, ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಇಂಡಸ್ಟ್ರಿಯಲ್ಲಿ ಒಬ್ಬನೇ ಕೆಲಸ ಮಾಡುತ್ತಿದ್ದರಿಂದ ಘಟನೆ ಯಾರಿಗೂ ತಿಳಿದಿರಲಿಲ್ಲ. ಬಳಿಕ ಅಲ್ಲಿನ ಸ್ಥಳೀಯರು ಬಂದು ನೋಡಿದಾಗ, ಯುವಕ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಇಂಡಸ್ಟ್ರೀಯಲ್ ಮಾಲಕರಿಗೆ ಮತ್ತು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಅಂಬ್ಯುಲೆನ್ಸ್ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ.
8 ತಿಂಗಳ ಹಿಂದೆ ಇಂಡಸ್ಟ್ರಿಗೆ ಕೆಲಸಕ್ಕೆ ಸೇರಿದ್ದ ಯುವಕ ಮನೆಗೆ ಆಧಾರ ಸ್ಥಂಭವಾಗಿದ್ದ. ತಂದೆ ಎರಡು ವರ್ಷಗಳ ಹಿಂದೆ ನಿಧರಾಗಿದ್ದರು.
ಮೃತ ನಾಗರಾಜ್ ತಾಯಿ ನಾಗವೇಣಿ, ಸಹೋದರ ನವರಾಜ್, ಸಹೋದರಿ ಪೂಜಾಶ್ರೀಯವರನ್ನು ಅಗಲಿದ್ದಾನೆ.
ಘಟನೆಯ ಕುರಿತಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.