ನವದೆಹಲಿ,ಅ. 09(MSP): ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಪಿಎನ್ಬಿ ಬ್ಯಾಂಕ್ ಗೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಯ ವಂಚನೆಯಿಂದ ಕೆನಡಾದ ವ್ಯಕ್ತಿಯೊಬ್ಬನ ನಿಶ್ಚಿತಾರ್ಥ ಮುರಿದು ಬಿದ್ದಿದೆ.
ಕೆನಡಾದಲ್ಲಿ ಆರ್ಥಿಕ ವ್ಯವಹಾರಗಳ ಕಂಪೆನಿಯೊಂದರ ಮುಖ್ಯಸ್ಥರಾದ ಆಲ್ಫೋನ್ಸೊ ಎಂಬುವರೇ ನೀರವ್ ಮೋದಿಯಿಂದ ವಂಚನೆಗೆ ಒಳಗಾದವರು. ನೀರವ್ ಮೋದಿಯ ಮಾತಿನಿಂದ ಮೋಡಿಗೆ ಒಳಗಾದ ಆಲ್ಫೋನ್ಸೊ ಉಂಗುರಗಳನ್ನು ಖರೀದಿಸಿದ್ದಾರೆ. ಆದರೆ ನೀರವ್ ನೀಡಿದ್ದು ಮಾತ್ರ ನಕಲಿ ಉಂಗುರವಾಗಿದ್ದು. ನಿಶ್ಚಿತಾರ್ಥದ ವೇಳೆ ಅಲ್ಫೋನ್ಸೋ ತಮ್ಮ ಭಾವೀ ಪತ್ನಿಗೆ ನೀಡಿದ್ದ ಈ ವಜ್ರದ ಉಂಗುರ ನಕಲಿ ಎಂದು ಗೊತ್ತಾದ ಮರುಕ್ಷಣವೇ ಆತನ ಭಾವಿ ಪತ್ನಿ ನಿಶ್ಚಿತಾರ್ಥವನ್ನೇ ಮುರಿದುಹಾಕಿದ್ದಾರೆ. ನೀರವ್ ನಿಂದ ವಂಚನೆಗೆ ಒಳಗಾದ ಅಲ್ಫೋನ್ಸೋಗೆ ಅತ್ತ ಕಡೆ ಹುಡುಗಿಯೂ ಇಲ್ಲ, ಇತ್ತ ಕಡೆ ಉಂಗುರವೂ ಇಲ್ಲ.. ಹಣವೂ ಇಲ್ಲ ಎಂಬಂತಾಗಿದೆ.
ಘಟನೆ ಹೇಗಾಯ್ತು?
2012ರಲ್ಲಿ ನೀರವ್ ಮೋದಿ ಹಾಗೂ ಕೆನಡಾದ ಆಲ್ಫೋನ್ಸೊಗೂ ಪರಿಚಯವಾಗಿ, ಕ್ರಮೇಣ ಅವರಿಬ್ಬರಲ್ಲಿ ಉತ್ತಮ ಆತ್ಮೀಯತೆ ಬೆಳೆದಿತ್ತು. ಆ ಬಳಿಕ ಏಪ್ರಿಲ್ ನಲ್ಲಿ ಆಲ್ಫೋನ್ಸೊ ತನ್ನ ಗೆಳತಿಯೊಂದಿಗೆ ಎಂಗೆಜ್ ಮೆಂಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಿಶ್ಚಿತಾರ್ಥ ಉಂಗುರಗಳನ್ನು ಕೊಂಡುಕೊಳ್ಳಲು ಯೋಚಿಸುತ್ತಿದ್ದಾಗ ಆಲ್ಫೋನ್ಸೊಗೆ ನೀರವ್ ನೆನಪಾಗಿದ್ದಾರೆ. ಹೀಗಾಗಿ ಈ ಬಗ್ಗೆ ನೀರವ್ಗೆ ಇ-ಮೇಲ್ ಕಳುಹಿಸಿದ್ದಾರೆ. ಆಗ ನೀರವ್ ಮೋದಿ , ಸರ್ವೋಚ್ಛ ಉಂಗುರಗಳೆಂದು ಹೇಳಿ 3.2 ಕ್ಯಾರಟ್ನ ಬ್ರಿಲಿಯಂಟ್ ಡೈಮಂಡ್ ಕಟ್ ಒಳಗೊಂಡ , 2 ಉಂಗುರಗಳನ್ನು ಕೆನಡಾದಲ್ಲಿರುವ ಆಲ್ಫೋನ್ಸೊ ನೀರವ್ ಕಳುಹಿಸಿಕೊಟ್ಟಿದ್ದಾನೆ. ಮಾತ್ರವಲ್ಲದೆ ಇದರ ಬೆಲೆ ಒಂದೂವರೆ ಕೋಟಿ ರೂ.ಗಳನ್ನು ಆನ್ಲೈನ್ ಮೂಲಕ ಪಡೆದಿದ್ದಾನೆ.
ಆದರೆ, ಉಂಗುರಗಳ ಗುಣಮಟ್ಟದ ಸರ್ಟಿಫಿಕೇಟ್ಗಳನ್ನು ತಿಂಗಳುಗಳಾದರೂ ಕಳುಹಿಸಿರಲಿಲ್ಲ. ಇದರಿಂದ ಸಂಶಯಗೊಂಡಿದ್ದ ಆಲ್ಫೋನ್ಸೊ ಭಾವಿ ಪತ್ನಿಯಾಗಬೇಕಾಗಿದ್ದವಳು ಉಂಗುರಗಳನ್ನು ಪರೀಕ್ಷಿಸಿದಾಗ ಅವು ನಕಲಿಯೆಂದು ಗೊತ್ತಾಗಿದೆ. ಇದರಿಂದ ಅಲ್ಫೋನ್ಸೋ ಮೇಲೆ ಕೋಪಗೊಂಡ ನೀನಿ ನನ್ನನು ವಂಚಿಸಿದ್ದಿಯೆಂದು ಆಕೆ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿದ್ದಾಳೆ. ಇದೇ ಕಾರಣಕ್ಕೆ ಆಲ್ಫೋನ್ಸೊ ಖಿನ್ನತೆಗೊಳಗಾಗಿದ್ದಾನೆ ಎಂದು ವಿದೇಶೀ ಪತ್ರಿಕೆಯೊಂದು ವರದಿ ಮಾಡಿದೆ.