ಬ್ರಹ್ಮಾವರ, ಅ 09(MSP): ಕೋಟಿ ಲಕ್ಷಗಳ ಸಂಖ್ಯೆ ಹೇಳಿದರೆ ಸಾಕು ಸೆಕುಂಡುಗಳಲ್ಲಿ ಉತ್ತರವನ್ನು ನಿಮ್ಮ ಮುಂದೆ ಇಡಬಲ್ಲ ಪೋರನಿಗೆ ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ.ಬದಲಾಗಿ ನೀರು ಕುಡಿದಷ್ಟೇ ಸಲೀಸು. ಪ್ರಸ್ತುತ ಬ್ರಹ್ಮಾವರದ ಲಿಟ್ಲರಾಕ್ ಇಂಡಿಯನ್ ಸ್ಕೂಲ್ನಲ್ಲಿ ಆರನೇಯ ತರಗತಿ ಓದುತ್ತಿರುವ ಈ ಪೋರನ ಹೆಸರು ಶ್ರೀನಿಧಿ ನೀರಮಾನ್ವಿ ,ವಯಸ್ಸು ಕೇವಲ 11. ಹೌದು ಈ 11 ವರ್ಷದ ಹುಡುಗನಿಗೆ ಹತ್ತು ಅಂಕೆಗಳನ್ನು ಹತ್ತು ಸಾಲುಗಳಲ್ಲಿ ಕೂಡಿಸಲು ಹೇಳಿದರೆ ಕೇವಲ 25 ಸೆಕುಂಡುಗಳು ಸಾಕು ಈತನಿಗೆ ಉತ್ತರಿಸಲು. ಇದು ಮಾತ್ರವಲ್ಲ ಕೂಡುವಿಕೆ ಕಳೆಯುವಿಕೆ , ಗುಣಕಾರ, ಭಾಗಕಾರ, ಕಷ್ಟಕರವಾದ ವರ್ಗಮೂಲ ಲೆಕ್ಕಗಳನ್ನು ನೀಡಿ ಫಟಾಫಟ್ ಎಂದು ಸೆಕುಂಡುಗಳಲ್ಲಿ ಉತ್ತರ ರೆಡಿ ಮಾಡುತ್ತಾನೆ.
ಗಣಿತದ ಬಗ್ಗೆ ವಿಶೇಷ ಒಲವುಹೊಂದಿರುವ ಶ್ರೀನಿಧಿಗೆ ಜಗತ್ತಿನ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಆಗಬೇಕೆನ್ನುವ ಆಸೆ. ಮುಂದೆ ಈತನಿಗೆ ಗಣಿತಜ್ಞನಾಗಿ ಸೂತ್ರಗಳನ್ನು ಕಂಡು ಹಿಡಿಯುವ ಗುರಿ ಇದೆ. ಶ್ರೀನಿಧಿಯ ತಂದೆ ಮತ್ತು ತಾಯಿ ಮೂಲತಃ ರಾಯಚೂರು ಜಿಲ್ಲೆಯ ನೀರಮಾನ್ವಿಯವರು.
ಶ್ರೀನಿಧಿ ಅಬಾಕಸ್ ಮತ್ತು ವೇದ ಗಣಿತವನ್ನು ಅಭ್ಯಾಸಿದ್ದಾನೆ. ಜರ್ಮನಿಯ ವೋಲ್ಟ್ಸ್ ಬರ್ಗ್ನಲ್ಲಿ 8 ನೇ ಮೆಂಟಲ್ ಕ್ಯಾಲ್ಕುಲೇಶನ್ ವಿಶ್ವಕಪ್ನಲ್ಲಿ ಶ್ರೀ ನಿಧಿ ಭಾಗವಹಿಸಿ ಇತರ ಸ್ವರ್ಧಾಳಿಗಳಿಗೆ ಪೈಪೋಟಿ ನೀಡಿದ್ದ. ವಿಶೇಷವೆಂದರೆ ವಿಶ್ವದ ಹಲವು ದೇಶಗಳಿಂದ ಆಯ್ಕೆಯಾದ 40 ಮಂದಿ ಭಾಗವಹಿಸಿದ್ದರು. ಇವರೆಲ್ಲರಿಗಿಂತ ಈತನೇ ಕಿರಿಯವನಾಗಿದ್ದ. ಜರ್ಮನಿಯ ರೆಕಾರ್ಡ್ ಹೋಲ್ಡರ್ ಸಂಸ್ಥೆಯೊಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಭಾರತದಿಂದ ಪಾಲ್ಗೊಂಡ ನಾಲ್ವರ ಪೈಕಿ ಕರ್ನಾಟಕದಿಂದ ಶ್ರೀನಿಧಿ ಪ್ರತಿನಿಧಿಸಿದ್ದರು. ಶ್ರೀನಿಧಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ಲೆಕ್ಕಚಾರಗಳನ್ನು, ವರ್ಗಮೂಲ ಕ್ಯಾಲೆಂಡರ್ ಗಳ ಮೂಲಕ ದಿನ ಪತ್ತೆ ಹಚ್ಚುವುದನ್ನು ಸ್ವಪ್ರಯತ್ನದಿಂದ ಕಲಿತಿದ್ದಾನೆ ಎನ್ನುತ್ತಾರೆ ಈತನ ಪೋಷಕರು.