ಕಾಸರಗೋಡು,ಅ 09(MSP): ವಿದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಸುಮಾರು ಎರಡು ಕಿ.ಗ್ರಾಂ ಹ್ಯಾಶಿಷ್ ಮಾದಕ ದ್ರವ್ಯ ತೈಲವನ್ನು ಅಬಕಾರಿ ಇಲಾಖೆಯ ವಿಶೇಷ ದಳ ಪಾಲಕ್ಕಾಡಿನಲ್ಲಿ ವಶಪಡಿಸಿಕೊಂಡು ಬಂಧಿಸಿದ್ದಾರೆ. ಕನ್ಯಾಕುಮಾರಿ ಒಲವಕ್ಕೋಡ್ ನಿವಾಸಿ ಸಿಂಧುಜಾ ಬಂದಿತ ಆರೋಪಿ.
ಈ ಯುವತಿಯಿಂದ ವಶಪಡಿಸಿಕೊಂಡ ಮಾದಕ ದ್ರವ್ಯದ ಬೆಲೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 8 ಕೋಟಿ ಎಂದು ಅಂದಾಜಿಸಲಾಗಿದೆ. ವಿಶೇಷ ದಳಕ್ಕೆ ಲಭಿಸಿದ ರಹಸ್ಯ ಮಾಹಿತಿಯನ್ವಯ ಪಾಲಕ್ಕಡ್ ರೈಲ್ವೆ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಯುವತಿಯನ್ನು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಆಕೆ ವಶದಲ್ಲಿದ್ದ ವ್ಯಾನಿಟಿ ಬ್ಯಾಗ್ ನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟಿದ್ದ ಹ್ಯಾಶಿಷ್ ಪತ್ತೆಯಾಗಿತ್ತು.
ಆಂದ್ರಪ್ರದೇಶದ ವಿಶಾಖಪಟ್ಟಯಿಂದ ತ್ರಿಶ್ಯೂರಿಗೆ ಸಾಗಿಸುವ ಮದ್ಯೆ ಕಾರ್ಯಾಚರಣೆ ನಡೆಸಲಾಗಿತ್ತು. ತ್ರಿಶ್ಯೂರಿನಲ್ಲಿ ಮಹಮ್ಮದ್ ಜಾಬಿರ್ ಎಂಬಾತನಿಗೆ ಸಿಂಧುಜಾ ಈ ಮಾದಕ ತೈಲವನ್ನು ಒಪ್ಪಿಸಬೇಕಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈಕೆಯಿಂದ ಪಡೆದುಕೊಂಡ ಮಹಮ್ಮದ್ ಜಾಬಿರ್ ಅದನ್ನು ಓಮಾನ್ ಗೆ ಕಳುಹಿಸಿಕೊಡುತ್ತಾನೆ . ಕೇವಲ ಸಾಗಾಣೆಯ ಕೆಲಸಕ್ಕಾಗಿಯೇ ಸಿಂಧುಜಾ ದಂಧೆಕೋರರಿಂದ ಒಂದು ಲಕ್ಷ ಪ್ರತಿಫಲ ಪಡೆತ್ತಿದ್ದು ಈ ಹಿಂದೆ 17 ಬಾರಿ ಹ್ಯಾಶಿಷ್ ಸಾಗಿಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.