ಬೆಂಗಳೂರು, ಅ 09(MSP): ಈ ಬಾರಿಯ ದಸರಾ ಹಬ್ಬವನ್ನು ಸರ್ಕಾರಿ ನೌಕರರಂತು ಅದ್ದೂರಿಯಾಗಿಯೇ ಆಚರಿಸುತ್ತಾರೆ. ಕಾರಣ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಂಪರ್ ರಜೆಯ ಕೊಡುಗೆಯನ್ನು ನೀಡಿದೆ. ಹೀಗಾಗಿ ನವರಾತ್ರಿಗೆ ಸಾಲು ರಜೆ ದೊರೆತ ಹಿನ್ನಲೆಯಲ್ಲಿ ಇವರ ಸಂಭ್ರಮ ಇಮ್ಮಡಿಸಲಿದೆ.
ರಾಜ್ಯ ಸರ್ಕಾರ ರಜೆ ಘೋಷಣೆಯನ್ನು ಮಾರ್ಪಾಡುಗೊಳಿಸಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಅಕ್ಟೋಬರ್ 18, 19ರಂದು ನವರಾತ್ರಿ ಪ್ರಯುಕ್ತ ಸಾರ್ವತ್ರಿಕ ರಜೆ ಇರುವುದರಿಂದ ಅ. 20ರ ಶನಿವಾರವನ್ನು ಕೂಡ ಸಾರ್ವತ್ರಿಕ ರಜೆಯನ್ನಾಗಿ ಘೋಷಣೆ ಮಾಡಿದೆ. ಅ. 21 ಭಾನುವಾರವಾದ್ದರಿಂದ ಸಾಲಾಗಿ ನಾಲ್ಕು ರಜೆಗಳು ಸಿಗಲಿವೆ. ಈ ಹಿಂದೆಯೇ ಸಿಎಂ ಕುಮಾರಸ್ವಾಮಿ ಎರಡನೇ ಶನಿವಾರ ರಜೆಯ ಬದಲು ಮೂರನೇ ಶನಿವಾರ ರಜೆ ಘೋಷಣೆಯ ಬಗ್ಗೆ ಅಧಿಕಾರಗಳ ಸಲಹೆ ಕೇಳಿದ್ದರು. ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಸ್ಥರ ಸಂಘ ಸಿಎಂ ಸಲಹೆಯನ್ನು ಸ್ವಾಗತಿಸಿದ್ದು ಈ ತಿಂಗಳು ಎರಡನೇ ಶನಿವಾರದ ರಜೆಯ ಬದಲಿಗೆ ಮೂರನೇ ಶನಿವಾರ ರಜೆ ನೀಡಲು ಸರ್ಕಾರ ನಿರ್ಧರಿಸಿದರೆ ನಮ್ಮ ಸಹಕಾರ ಖಂಡಿತಾ ಇದೆ. ಆಡಳಿತಾತ್ಮಕ ದೃಷ್ಟಿಯಿಂದ ಇದು ಉತ್ತಮ ನಿರ್ಧಾರ ಎಂದು ತಿಳಿಸಿದ್ದರು.
ಸಾಲು ಸಾಲು ರಜೆಗಳ ಮದ್ಯದಲ್ಲಿ ಒಂದು ಕೆಲಸದ ದಿನವಿದ್ದರೆ ಅಂದು ರಜೆ ಹಾಕುವವರ ಸಂಖ್ಯೆಯೇ ಹೆಚ್ಚಾಗಿರುವುರದಿಂದ ಸರ್ಕಾರವೇ ರಜೆ ಬದಲಾವಣೆ ಮಾಡಿಈ ಘೋಷಣೆ ಮಾಡಿದೆ. ಅ. 20ರ ಬದಲಿಗೆ ಅ. 13ರ ಎರಡನೇ ಶನಿವಾರವನ್ನು ವರ್ಕಿಂಗ್ ಡೇ ಎಂದು ಪರಿಗಣಿಸಲಾಗಿದೆ ಎಂದು ಸರ್ಕಾರದ ಸಚಿವಾಲಯ ಸುತ್ತೋಲೆ ಹೊರಡಿಸಿದೆ.