Karavali
ಬೈಂದೂರು: ಭಾರತೀಯ ಜನತಾ ಪಕ್ಷ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರವಾಗಿದೆ: ಸಚಿವ ಕುಮಾರ ಬಂಗಾರಪ್ಪ
- Sun, Oct 08 2017 08:36:18 PM
-
ಬೈಂದೂರು,ಅ08: ರಾಜ್ಯದಲ್ಲಿ ಕೆಲವು ಪಕ್ಷಗಳು ಬಿಜೆಪಿ ಪಕ್ಷವನ್ನು ಹಿಂದುಳಿದ ವರ್ಗದ ಜನರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರವಾಗಿದ್ದು ಇತ್ತೀಚಿಗೆ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜನರು ಬಿಜೆಪಿ ಪರವಾಗಿ ನಿಂತಿರುವುದರಿಂದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಅನೇಕ ಹಿಂದುಗಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ವಿಶೇಷವಾಗಿ ಅಬ್ದುಲ್ ಕಲಾಂ, ರಾಮನಾಥ ಕೋವಿಂದ್ ಅಂತವರನ್ನು ಗುರುತಿಸಿ ಅವರಿಗೆ ಅತ್ಯುನ್ನತ ಸ್ಥಾನ ನೀಡಿ ಗೌರವಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರಕಾರವನ್ನು ಆಡಳಿತಕ್ಕೆ ತರಲಿದ್ದಾರೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದ್ದಾರೆ.
ಬೈಂದೂರು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಶ್ರಯದಲ್ಲಿ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಭಾನುವಾರ ಜರಗಿದ ಬ್ರಹ್ಮಶ್ರೀ ನಾರಾಯಣಗುರುಗಳ ೧೬೩ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿದ್ದು ಹಲವು ರಾಜ್ಯಗಳಲ್ಲಿ ಅಧಿಕಾರಿ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಮೇಲೆ ಜನರು ಇಟ್ಟ ನಂಬಿಕೆ ಹುಸಿಯಾಗಿದೆ. ಸಮುದಾಯವನ್ನು, ಧರ್ಮವನ್ನು ಒಡೆದು ಜನರ ನಡುವೆ ವಿಷಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹೀಗಾಗಿ ಅನೇಕ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಬಲಗೊಳಿಸಲು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ ಮತ್ತೊಮ್ಮೆ ಒಳ್ಳೆಯ, ಸ್ವತಂತ್ರ, ಸುಭದ್ರ ಬಿಜೆಪಿ ಸರಕಾರವನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಆರಂಭಿಸಲಿದ್ದಾರೆ. ಪಕ್ಷದ ವರಿಷ್ಠರು ರಾಜ್ಯದಲ್ಲಿ ಕನಿಷ್ಠ ೧೫೦ ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ನೀಡಿದ್ದು, ಈ ಗುರಿ ಮುಟ್ಟಲು ಎಲ್ಲಾ ವರ್ಗದ ಜನರು ಜಾತಿ, ಮತ, ಧರ್ಮವನ್ನು ಮರೆತು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾರಾಯಣ ಗುರುಗಳು ಯಾವುದೇ ಜಾರಿ ಮತ, ಪಕ್ಷಕ್ಕೆ ಸೀಮಿತರಾದವರಲ್ಲ. ಭಾರತೀಯ ಜನತಾ ಪಕ್ಷ ನಾರಾಯಣ ಗುರಗಳ ಸಂದೇಶವನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬಿಜೆಪಿ ನಾರಾಯಣ ಗುರುಗಳ ಬಗ್ಗೆ ನಡೆಸುತ್ತಿರುವ ಕಾರ್ಯಕ್ರಮವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ ತಾಕತ್ತಿದ್ದರೆ ನಾರಾಯಣ ಗುರುಗಳ ಕಾರ್ಯಕ್ರಮ ಆಯೋಜಿಸಲಿ ಎಂದು ಸವಾಲು ಹಾಕಿದರು.
ವಾರಾಹಿ ಯೋಜನೆಗಾಗಿ ಸುಮಾರು ೭೦೦ ಕೋಟಿ ರೂ. ಖರ್ಚು ಮಾಡಿರುವ ಸರಕಾರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ವಾರಾಹಿ ನೀರಿಯನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ವಾರಾಹಿ ನೀರನ್ನು ಎಲ್ಲಾ ಗ್ರಾಮಗಳಿಗೆ ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಜಾತಿ ಜನಗಣತಿಗಾಗಿ ಸರ್ಕಾರ ೨೦೦ ಕೋಟಿ ರೂ. ಖರ್ಚು ಮಾಡಿದ್ದು ಈವರೆಗೆ ಯಾಕಾಗಿ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿಲ್ಲ ಎಂದು ಸಚಿವರು ಹಾಗೂ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. ರಾಜ್ಯ ಸರ್ಕಾರ ಜಾತಿ ಜನಗಣತಿ ವರದಿಯನ್ನು ಕೂಡಲೇ ಬಿಡಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕುಂದಾಪುರ ತಾಲೂಕಿನಲ್ಲಿ ಸುಮಾರು ೧೨ ಸಾವಿರ ಮಂದಿಗೆ ಈವರಗೆ ಹಕ್ಕು ಪತ್ರ ನೀಡಿಲ್ಲ. ಬಿಜೆಪಿ ಹೋರಾಟದ ಫಲವಾಗಿ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದ್ದು, ಬಡವರಿಗೆ ತುಂಡು ಭೂಮಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮುಂದಿನ ಒಂದು ತಿಂಗಳೊಳಗೆ ಎಲ್ಲರಿಗೂ ಹಕ್ಕು ಪತ್ರ ನೀಡಬೇಕು. ಇಲ್ಲದಿದ್ದರೆ ಮುಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಎಲ್ಲರಿಗೂ ಹಕ್ಕು ಪತ್ರ ನೀಡುವ ಕೆಲಸವನ್ನು ಮಾಡಲಿದ್ದೇವೆ. ಕುಮಾರ ಬಂಗಾರಪ್ಪನವರು ಹಿಂದುಳಿದ ವರ್ಗಗಳ ಸಮಾವೇಶದ ಮೂಲಕ ಬಿಜೆಪಿ ರಥವನ್ನು ಬೈಂದೂರು ಕ್ಷೇತ್ರದಲ್ಲಿ ಬಿಟ್ಟಿದ್ದು, ಬೈಂದೂರು ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಶಾಸಕರು ಆಯ್ಕೆಯಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೈಂದೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಗಣೇಶ್ ಪೂಜಾರಿ ಕೆಂಚನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿದರು. ಇದೇ ಸಂದರ್ಭ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಕಲಾರಂಗ ಮತ್ತಿತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯಿಂದ ಗುರುತಿಸಿಕೊಂಡ ೧೬ ಮಂದಿ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಉಡುಪಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ, ಶೋಭಾ ಜಿ.ಪುತ್ರನ್, ಬಾಬು ಶೆಟ್ಟಿ, ತಾಪಂ ಸದಸ್ಯ ನಾರಾಯಣ ಕೆ. ಗುಜ್ಜಾಡಿ, ಪಕ್ಷದ ಮುಖಂಡರಾದ ಸಂತೋಷ ಜತ್ತನ್, ದೀಪಕಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ರವಿ ಗಾಣಿಗ ಮಲ್ಲಾರಿ, ಶೇಖರ ದೇವಾಡಿಗ, ರಾಘವೇಂದ್ರ ನೆಂಪು, ಶ್ರೀನಿವಾಸ ಸೌಡ, ನಾರಾಯಣ ಖಾರ್ವಿ, ರವಿ ಖಾರ್ವಿ, ಸಂತೋಷ ದೇವಾಡಿಗ, ರವಿ ಪಡುಕೋಣೆ, ಸಂತೋಷ ಕೊಠಾರಿ, ಗಣೇಶ ಹೇರಂಜಾಲು, ರಾಜೇಶ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.