ಮಂಗಳೂರು,ಅ 10 (MSP): ಮಂಗಳೂರು - ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲು ಸೇವೆ ಬುಧವಾರ ಆರಂಭಗೊಳ್ಳವ ಸಾಧ್ಯತೆ ಇದ್ದು, ಅಧಿಕಾರಿಗಳು ಈವರೆಗೆ ಅಧಿಕೃತ ಮಾಹಿತಿ ರವಾನಿಸಿಲ್ಲ. ಒಂದು ವೇಳೆ ಸೇವೆ ಆರಂಭಗೊಂಡರೆ ಎರಡು ತಿಂಗಳ ಬಳಿಕ ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಪುನಾರಂಭಗೊಂಡತಾಗುವುದು ಖಚಿತ. ಪ್ರಾಕೃತಿಕ ವಿಕೋಪದಿಂದ ರಾಜಧಾನಿ ಬೆಂಗಳೂರು ನಡುವೆ ರೈಲ್ವೆ ಸಂಪರ್ಕ ಕಡಿದುಕೊಂಡಿದ್ದ ಕರಾವಳಿಯ ಸಂಚಾರ ವ್ಯವಸ್ಥೆ ಇದರಿಂದ ಕೊಂಚ ಸುಧಾರಣೆಯಾಗಬಹುದು.
ಬುಧವಾರ ರಾತ್ರಿ ಬೆಂಗಳೂರಿನಿಂದ ಹಾಗೂ ಗುರುವಾರ ಬೆಳಗ್ಗೆ ಕಾರವಾರದಿಂದ ಪ್ಯಾಸೆಂಜರ್ ರೈಲು ಹೊರಡಲಿದೆ ಎಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಮತ್ತು ಎಡಕುಮೇರಿ ಮದ್ಯೆ ಸುಮಾರು 55 ಕಿ.ಮೀ. ರೈಲ್ವೆ ಹಳಿಯ ಘಾಟಿ ಪ್ರದೇಶದಲ್ಲಿ ಹಲವೆಡೆ ಭೂಕುಸಿತ ಸಂಭವಿಸಿ ಹಳಿಗಳೇ ಕಾಣದಂತಾಗಿತ್ತು. ಭೂಕುಸಿತದಿಂದ ರಾಶಿ ಬಿದ್ದ ಮಣ್ಣು ತೆಗೆದು ಹಾಕಿ ಅಲ್ಲಲ್ಲಿ ತಡೆಗೋಡೆ ನಿರ್ಮಿಸಲು ಹಾಗೂ ಹಳಿಗಳ ದುರಸ್ತಿಗಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ನಿಷೇಧಿಸಲಾಗಿತ್ತು. ಅದರೆ ನಿಷೇಧ ಅವಧಿಯನ್ನು ನೈರುತ್ಯ ರೈಲ್ವೆಯು ಹಲವು ಸಾರಿ ಮುಂದೂಡಿತ್ತು.
ಇದೀಗ ರಿಪೇರಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಾಯೋಗಿಕ ಓಡಾಟದ ನಂತರ ಕೆಲವು ದಿನಗಳ ಹಿಂದೆ ಈ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಲಾಗಿತ್ತು. ಗೂಡ್ಸ್ ರೈಲು ಸಂಚಾರ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಮತ್ತು ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸದ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಅವಕಾಶ ಒದಗಿಸಲಾಗಿದೆ ಎಂದು ತಿಳಿದುಬಂದಿದೆ