ಮೈಸೂರು,ಅ 10 (MSP): ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ ವೈಭವದ ಚಾಲನೆ ನೀಡಿದರು. ಸುಧಾ ಮೂರ್ತಿಯವರು ಚಾಮುಂಡಿ ದೇವಿಗೆ ಅಗ್ರಪೂಜೆ ಸಲ್ಲಿಸಿದ ಬಳಿಕ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಸಂಸ್ಕೃತಿ ಖಾತೆ ಸಚಿವೆ ಜಯಮಾಲಾ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ ಸಿಂಹ ಮೊದಲಾದವರು ಇದ್ದರು.
ಇದಕ್ಕೂ ಮೊದಲು ಸುಧಾಮೂರ್ತಿ ಮತ್ತವರ ಕುಟುಂಬದ ಸದಸ್ಯರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಸುಧಾಮೂರ್ತಿ, ಕನ್ನಡದ ಜನತೆಗೆ ನಮಸ್ಕಾರಗಳು ತಿಳಿಸಿ ಮಾತು ಆರಂಭಿಸಿ ನಮ್ಮ ಸಂಸ್ಕೃತಿಯ ಪ್ರತಿರೂಪವಾದ ದಸರಾ ಮಹೋತ್ಸವ ಉದ್ಘಾಟನೆಗೆ ನನ್ನ ಆಯ್ಕೆ ಮಾಡಿದ್ದು ಪೂರ್ವ ಜನ್ಮದ ಪುಣ್ಯ. ಕರುನಾಡಿನ ಸಮಗ್ರ ಅಭಿವೃದ್ಧಿಗೆ ಮೈಸೂರು ದೊರೆಗಳ ಕೊಡುಗೆ ಅನನ್ಯ. ಮೈಸೂರಿನ ಅರಸರು ಇರುತ್ತಿಲ್ಲದಿದ್ದರೆ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು ಎಂದರು. ಇದೇ ವೇಳೆ ಕೊಡಗು ಮಡಿಕೇರಿಯಲ್ಲಿ ನಡೆದ ಪ್ರಾಕೃತಿಕ ದುರಂತದಿಂದಾಗಿ ನಿರಾಶ್ರಿತರಾದವರ ಶ್ರೇಯೋಭಿವೃದ್ದಿಗೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂ ನೀಡುವುದಾಗಿ ಘೋಷಿಸಿದರು. ಅಲ್ಲದೆ ಮಡಿಕೇರಿಯ ಪುನರುತ್ಥಾನಕ್ಕೆ ಸರ್ಕಾರದ ಜೊತೆ ಎಲ್ಲರೂ ಕೆಲಸ ಮಾಡಬೇಕು ಎಂದು ಕರೆಕೊಟ್ಟರು.
ಇನ್ನು ಮೈಸೂರಿನಲ್ಲಿ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದಸರಾ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನ ಮೈಸೂರಿಗೆ ಆಗಮಿಸುತ್ತಿದ್ದಾರೆ. ವಿಜಯ ದಶಮಿ ದಿನ ನಡೆಯುವ ಜಂಬೂ ಸವಾರಿ ವಿಶ್ವ ಪ್ರಸಿದ್ಧಿ ಗಳಿಸಿದೆ.