ಮಂಗಳೂರು, ಅ 10(SM): ಗಂಜಿಮಠ ನಿವಾಸಿ ಸಮೀರ್ ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಫಿರ್ದೌಸ್ ಮತ್ತು ಪ್ರಿಯಕರ ಆಸೀಫ್ ಕೈವಾಡವಿರುವುದು ಖಚಿತವಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಸಮೀರ್ ಮನೆಮಂದಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ಗೆ ಮನವಿ ಸಲ್ಲಿಸಿದ್ದಾರೆ.
ಸಮೀರ್ ತಮಿಳುನಾಡಿನ ದೇವದಾನ ಪಟ್ಟಿ ಎಂಬಲ್ಲಿ ಮುಖಕ್ಕೆ ಆಸಿಡ್ ಎರಚಿ ನಿಗೂಢ ರೀತಿಯಲ್ಲಿ ಹತ್ಯೆಯಾಗಿದ್ದ. ಪ್ರಕರಣದಲ್ಲಿ ಸಮೀರ್ ಪತ್ನಿ ಹಾಗೂ ಆಕೆಯ ಪ್ರಿಯಕರ ಆರೋಪಿಗಳೆಂದು ತಿಳಿದು ಬಂದಿತ್ತು. ಇತ್ತೀಚೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದು. ಹಂತಕರಿಗೆ ಜೀವಾವಧಿ ಶಿಕ್ಷೆಯನ್ನು ಕೊಡಿಸಲು ಯತ್ನಿಸಬೇಕೆಂದು ಕೋರಿ ಸಮೀರ್ ಮನೆಮಂದಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಸಮೀರ್ ತಂದೆ ಅಹ್ಮದ್ ಸಾಹೇಬ್, ಶಾಕೀರ್ ಹುಸೈನ್, ಸಮೀನಾ ಬಾನು ಪೊಲೀಸ್ ಕಮಿಷನರ್ ಸುರೇಶ್ ಅವರನ್ನು ಭೇಟಿ ಮಾಡಿ ಸಮೀರ್ ಹತ್ಯೆಗೆ ಮೂಲ ಕಾರಣವಾಗಿರುವ ಆತನ ಪತ್ನಿ ಫಿರ್ದೌಸ್, ಪ್ರಿಯಕರ ಆಸೀಫ್ ನೇರ ಶಾಮೀಲಾಗಿದ್ದಾರೆ. ಅಲ್ಲದೆ ನಮ್ಮ ಮನೆಯ ಚಿನ್ನಾಭರಣಗಳನ್ನೂ ಮರಳಿಸಿಕೊಡುವಂತೆ ಅವರು ಕಮಿಷನರ್ ಅವರಲ್ಲಿ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 19ರಂದು ತನ್ನ ಮಗ ಸಮೀರ್ ಕಾಣೆಯಾಗಿರುವ ಬಗ್ಗೆ ಅವರ ಪೋಷಕರು ಪೊಲೀಸರಿಗೆ ದೂರು ನೀಡಲು ತೆರಳಿದ ಸಂದರ್ಭದಲ್ಲಿ ಸಮೀರ್ ಪತ್ನಿ ಫಿರ್ದೌಸ್ ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.