ಮಂಗಳೂರು, ಅ 9: ವಾಲಿಬಾಲ್ ಪಂದ್ಯಾ ಟದ ವೇಳೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ಮಂಗಳೂರಿನ ಬಜಾಲ್ ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ. ಆದ್ರೆ ಇದೀಗ ಈ ಘರ್ಷಣೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವಿಕೆಟ್ ಬ್ಯಾಟ್ ಸೇರಿ ಮಾರಕಾಯುಧ ಹಿಡಿದು ಅಟ್ಟಾಡಿಸೋ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.







ಇನ್ನು ಈ ಘಟನೆಯಲ್ಲಿ ವಾಹನಗಳನ್ನು ಜಖಂಗೊಳಿಸಿ ಮನೆಯೊಂದಕ್ಕೆ ಕಲ್ಲು ತೂರಾಟ ನಡೆದ ಘಟನೆಯಿಂದಾಗಿ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಫೀಝ್ , ಇಜಾಝ್ ಮತ್ತು ಅಣ್ಣು ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು. ಬಜಾಲಿನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ವಾಲಿಬಾಲ್ ಪಂದ್ಯಾಟ ವನ್ನು ಆಯೋಜಿಸಲಾಗಿತ್ತು. ಇದನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಈ ನಡುವೆ ವಜಾಹ್ ಎಂಬಾತ ಸ್ಥಳದಲ್ಲಿದ್ದ ಅಣ್ಣು ಎಂಬಾತನ ತಲೆಗೆ ಬಡಿದು ತಲೆಮರೆಸಿಕೊಂಡಿದ್ದ. ಇದರಿಂದ ಇತ್ತಂಡಗಳು ಜಮಾಯಿಸಿ ೧೫ ಮಂದಿಯ ತಂಡ ಮನೆಯೊಂದರ ಕಿಟಕಿ ಗಾಜುಗಳನ್ನು ಒಡೆದು ದಾಂಧಲೆಗೈದು, ಸ್ಕೂಟರೊಂದನ್ನು ಪುಡಿಗೈದಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಹಫೀಝ್ ಮತ್ತು ಇಜಾಝ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ. ದಾಂಧಲೆ ವೇಳೆ ಇದ್ದ ೧೫ ಮಂದಿಯಲ್ಲಿ ದೊಣ್ಣೆ ಸಹಿತ ಮಾರಕಾಸ್ತ್ರಗಳಿದ್ದವು ಎಂದು ಆಸ್ಪತ್ರೆಯಲ್ಲಿ ದಾಖಲಾದ ಇಬ್ಬರು ಆರೋಪಿಸಿದ್ದಾರೆ. ತಂಡದಲ್ಲಿ ನಿತಿನ್, ಸಮಿತ್, ಆಕಾಶ್, ರಕ್ಷಕ್, ನಿಖಿಲ್, ಸ್ಟೀವನ್, ಆಶಿಕ್ ಮತ್ತು ರಾಕೇಶ್ ಎಂಬವರಿದ್ದರು ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಕಂಕನಾಡಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಎರಡು ತಂಡಗಳ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಗಳಿಗೆ ಹುಡುಕಾಟ ಮುಂದುವರಿಸಿದ್ದಾರೆ.