ಮಂಗಳೂರು, ಅ12(SS): ಮಂಗಳೂರಿನ ಉಳ್ಳಾಲ, ಸೋಮೇಶ್ವರದಲ್ಲಿ ಕಡಲು ಉಕ್ಕೇರುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ತಿತ್ಲಿ ಚಂಡಮಾರುತದ ಪರಿಣಾಮ ಬೀರುತ್ತಿದೆ.
ಉಳ್ಳಾಲ, ಸೋಮೇಶ್ವರದ ಕಡಲು ಉಕ್ಕೇರುತ್ತಿದ್ದು, ಸಮುದ್ರದ ಸಮೀಪವಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ತಿತ್ಲಿ ಚಂಡಮಾರುತದ ಪರಿಣಾಮ, ಉಳ್ಳಾಲ ಸಮೀಪದ ಸೋಮೇಶ್ವರ, ಪೆರಿಬೈಲ್ನಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಸಮುದ್ರದ ಸಮೀಪದಲ್ಲಿ ಮನೆಯಿರುವ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಹಿಲೆರಿಯಾ ನಗರದಲ್ಲಿರುವ 3 ಮನೆಗಳು ಸಮುದ್ರಪಾಲಾಗಿವೆ. 41 ಮನೆಗಳು ಅಪಾಯದಂಚಿನಲ್ಲಿ ಸಿಲುಕಿವೆ. ಹಿಲೆರಿಯಾ ನಗರದ ಐಸಮ್ಮ, ಜಮೀಲಾ, ಅನ್ವರ್ ತಸ್ಲೀಂ ಎಂಬವರ ಮನೆಗಳು ಸಮುದ್ರದ ಪಾಲಾಗಿದ್ದು, ಮನೆಯಲ್ಲಿ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಉಚ್ಚಿಲ ಪೆರಿಬೈಲು ಸಮೀಪವೂ ಅಲೆಗಳು ರಸ್ತೆಯನ್ನು ದಾಟಿ ಅಪ್ಪಳಿಸಿದ ಪರಿಣಾಮ, ರಸ್ತೆ ಮರಳಿನಿಂದ ಮುಚ್ಚಿಹೋಗಿದೆ. ಜನವಸತಿ ಪ್ರದೇಶದಲ್ಲಿ ಉಪ್ಪು ನೀರು ನಿಂತಿರುವುದರಿಂದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ.
ಈ ನಡುವೆ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡದೆ ಬೇಜವಾಬ್ದಾರಿ ಮೆರದಿದೆ ಎಂದು ಸ್ಥಳೀಯರು ದೂರಿದ್ದಾರೆ.