ಬಂಟ್ವಾಳ, ಅ 9: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ರಸ್ತೆಯಲ್ಲಿ ಕಸದ ರಾಶಿ ಬಿದ್ದು ದುರ್ನಾತ ಬೀರುತ್ತಿದೆ. ಬಂಟ್ವಾಳದ ಪುರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯ ಸಮಸ್ಯೆಗಳನ್ನು ಪರಿಹರಿಸಲು ಆಡಳಿತ ಮತ್ತು ಅಧಿಕಾರಿ ವರ್ಗ ಇಲ್ಲದ ಕಾರಣ ಸಮಸ್ಯೆ ಇಲ್ಲಿ ಗಂಭೀರ ರೂಪ ತಾಳಿದೆ.
ಜನರು ಕಸದ ರಾಶಿಯಲ್ಲೆ ಸತ್ತ ಪ್ರಾಣಿಗಳನ್ನು ಎಸೆಯುವುದು ಹಾಗೂ ಕೊಳೆತ ಗಬ್ಬು ವಾಸನೆ ಬರುವ ವಸ್ತುಗಳನ್ನು ಎಸೆದು ಹೋಗುತ್ತಾರೆ. ಇದನ್ನು ತಿನ್ನಲು ಬೀದಿ ನಾಯಿಗಳು ಮುಗಿ ಬೀಳುವುದಲ್ಲದೆ ಈ ದಾರಿಯಲ್ಲಿ ಹೋಗುವ ಪಾದಚಾರಿಗಳಿಗೆ ಬೀದಿ ನಾಯಿಯ ಕಾಟ ಆರಂಭವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಸದ ರಾಶಿಯನ್ನು ಪ್ರತಿದಿನ ವಿಲೇವಾರಿ ಮಾಡದ ಕಾರಣ ಇಲ್ಲಿ ಕೊಳೆತ ನೀರು ನಿಂತು ಸೊಳ್ಳೆ ಉತ್ಪಾದನೆಯ ತಾಣವಾಗಿ ಮಾರ್ಪಾಡು ಆಗಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಅದರೆ ಯಾವುದೆ ಕ್ರಮ ಇಲಾಖೆಯಿಂದ ಆಗಿಲ್ಲ ಅನ್ನೋದು ಜನರ ವಾದ.
ಕಸದ ರಾಶಿಯ ಹತ್ತಿರದಲ್ಲಿ ಸಾಕಷ್ಟು ಮನೆಗಳಿದ್ದು ಅ ಮನೆಯ ಬಾವಿಗಳಿಗೆ ಇದರ ಕೊಳಕು ನೀರು ಇಂಗುವ ಸಾಧ್ಯತೆಗಳಿದ್ದು ಈ ಬಗ್ಗೆ ಆರೋಗ್ಯಇಲಾಖೆಯು ಗಮನಹರಿಸಬೇಕಾಗಿದೆ. ಇದೇ ರಸ್ತೆಯಲ್ಲಿ ಇಲ್ಲಿನ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ನಡೆದು ಹೋಗುವುದರಿಂದ ಹೆಚ್ಚಿನ ತೊಂದರೆ ಇದೆ. ಹಾಗಾಗಿ ರಾಶಿ ಹಾಕಿರುವ ಕಸವನ್ನು ದಿನೇ ದಿನೇ ವಿಲೇವಾರಿ ಮಾಡಬೇಕು ಮತ್ತು ಅದಷ್ಟು ಬೇಗ ತ್ಯಾಜ್ಯಗಳನ್ನು ಸಂಸ್ಕರಣ ಘಟಕಕ್ಕೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯ ಜನ ಒತ್ತಾಯ ಮಾಡಿದ್ದಾರೆ.