ವಿಟ್ಲ, ಅ 12(SM): ಶಬರಿಮಲೆ ಪಾವಿತ್ರ್ಯತೆ ಉಳಿಸುವಂತೆ ಆಗ್ರಹಿಸಿ ವಿಟ್ಲ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ವಿಟ್ಲ ಜೈನ ಬಸದಿಯಿಂದ ದೇಗುಲದವರೆಗೆ ನಡೆದ ಶಾಂತಿ ಮೆರವಣಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ಸುಪ್ರೀಂಕೋರ್ಟ್ ಇತ್ತೀಚೆಗೆ ಕೇರಳದ ಪವಿತ್ರ ತೀರ್ಥ ಕ್ಷೇತ್ರವಾಗಿರುವ ಶಬರಿಮಲೆ ದೇವಾಸ್ಥಾನದಲ್ಲಿ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ನೀಡಿದ ತೀರ್ಪಿನ ವಿರುದ್ಧವಾಗಿ ವಿಟ್ಲ ಪೇಟೆಯಲ್ಲಿ ಇಂದು ಶಾಂತಿ ಪ್ರತಿಭಟನೆ ನಡೆಸಲಾಗಿತ್ತು. ಶಾಂತಿ ಮೆರವಣಿಗೆ ನೆಪದಲ್ಲಿ ಅಕ್ರಮವಾಗಿ ಜನ ಸೇರಿ ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆ ಮಾಡಿದ್ದಾರೆಂಬ ಆರೋಪದಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೆರವಣಿಗೆ ನಡೆಸಿದ ಪರಿಣಾಮ ಸಾರ್ವಜನಿಕ ರಸ್ತೆಯಲ್ಲಿ ನಡೆದಾಡುವ ಜನರಿಗೆ, ವಾಹನಗಳ ಸುಗಮ ಸಂಚಾರಕ್ಕೆ, ವ್ಯಾಪಾರ ವ್ಯವಹಾರಗಳಿಗೆ ತೊಂದರೆಯುಂತಾಗಿದೆ. ಅಲ್ಲದೆ ಸಾರ್ವಜನಿಕರಿಗೆ ಕಿರುಕುಳ ಉಂಟು ಮಾಡಿದ್ದಾರೆ. ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಮೆರವಣಿಗೆ ನಡೆಸಿರುವುದಕ್ಕೆ ಸ್ವ ಪ್ರೇರಿತ ಪ್ರಕರಣವನ್ನು ಇಲಾಖೆ ದಾಖಲಿಸಿಕೊಂಡಿದೆ.
ವಿಟ್ಲ ಠಾಣಾ ಪೊಲೀಸರ ಈ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಕೆಂಡಮಂಡಲವಾಗಿವೆ. ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿವೆ.