ಮಂಗಳೂರು, ಅ13(SS): ಮಂಗಳೂರಿನ ಉಳ್ಳಾಲ, ಸೋಮೇಶ್ವರದಲ್ಲಿ ಕಡಲು ಉಕ್ಕೇರುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ತಿತ್ಲಿ ಚಂಡಮಾರುತದ ಪರಿಣಾಮ ಬೀರುತ್ತಿದೆ. ಚಂಡಮಾರುತದ ಪ್ರಭಾವದಿಂದ ಕಳೆದ ಮೂರು ದಿನಗಳಿಂದ ಉಳ್ಳಾಲದಲ್ಲಿ ಸಮುದ್ರ ರೌದ್ರಾವತಾರ ತಾಳುತ್ತಿದೆ.
ಉಳ್ಳಾಲ, ಸೋಮೇಶ್ವರದ ಕಡಲು ಉಕ್ಕೇರುತ್ತಿದ್ದು, ಸಮುದ್ರದ ಸಮೀಪವಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ತಿತ್ಲಿ ಚಂಡಮಾರುತದ ಪರಿಣಾಮ, ಉಳ್ಳಾಲ ಸಮೀಪದ ಸೋಮೇಶ್ವರ, ಪೆರಿಬೈಲ್ನಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಸಮುದ್ರದ ಸಮೀಪದಲ್ಲಿ ಮನೆಯಿರುವ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
47 ಮನೆಗಳು ಅತ್ಯಂತ ಅಪಾಯದಲ್ಲಿರುವ ಮನೆಗಳೆಂದು ಗುರುತಿಸಲಾಗಿದೆ. ಉಳ್ಳಾಲ ಕೈಕೋ, ಕಿಲೆರಿಯಾನಗರ, ಸುಭಾಷ್ನಗರದಲ್ಲಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಕೈಕೋದಲ್ಲಿ ಝೋಹರಾ ರಹೀಮ್ ಅವರ ಮನೆ ಸಂಪೂರ್ಣ ಸಮುದ್ರ ಪಾಲಾಗಿದೆ.
ಸೋಮೇಶ್ವರ ಉಚ್ಚಿಲದ ಪೆರಿಬೈಲ ಪ್ರದೇಶದಲ್ಲೂ ಸಮುದ್ರದ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿದ್ದು, ಸ್ಥಳೀಯ 3 ಮನೆಗಳಿಗೆ ಹಾನಿಯಾಗಿದೆ. ಉಳ್ಳಾಲದ ಕೈಕೋ, ಕಿಲೆರಿಯಾನಗರ, ಸುಭಾಷ್ನಗರದಲ್ಲಿ ಸಮುದ್ರ ತಟದ 162 ಮನೆಗಳಲ್ಲಿ 47 ಮನೆಗಳನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗಿದೆ.
ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವಂತೆ ಜಾತ್ಯಾತೀತ ಜನತಾದಳದ ಉಳ್ಳಾಲ ವಿಧಾನ ಸಭಾ ಕ್ಷೇತ್ರದವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.