ನವದೆಹಲಿ, ಅ13(SS): ತಮಗಾದ ದೌರ್ಜನ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿಯರು, ಪತ್ರಕರ್ತೆಯರು ಸೇರಿ ಅನೇಕ ಮಹಿಳೆಯರು #MeToo ಅಭಿಯಾನ ಮೂಲಕ ಹೇಳಿಕೊಳ್ಳುತ್ತಿದ್ದು, ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ.
ಮಹಿಳೆಯರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವ ಸಮಯ ಬಂದಾಗಿದೆ ಎಂದು ಟ್ವೀಟ್ ಆರಂಭಿಸಿರುವ ರಾಹುಲ್ ಗಾಂಧಿ, ಯಾರು ಮಹಿಳೆಯರನ್ನು ಗೌರವದಿಂದ ಕಾಣುವುದಿಲ್ಲವೋ ಅವರಿಗೀಗ ಜಾಗವಿಲ್ಲ. ಬದಲಾವಣೆ ತರಬೇಕಾದರೆ ಸತ್ಯವನ್ನು ಏರುದನಿಯಲ್ಲಿ ಮತ್ತು ಸ್ಪಷ್ಟವಾಗಿ ಹೇಳಬೇಕು ಎಂದು ಹೇಳಿದ್ದಾರೆ.
ಕೆಲಸದ ಸ್ಥಳ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಆರೋಪ ವಿರುದ್ಧ ಧ್ವನಿ ಎತ್ತಲು ಕಳೆದ ವಾರದಿಂದ #MeToo ಅಭಿಯಾನ ಆರಂಭವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ವಿರುದ್ಧ ಧ್ವನಿ ಎತುತ್ತಿದ್ದಾರೆ.
ಈ ಸಂದರ್ಭ ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ಹಾಗೂ ಘನತೆಯೊಂದಿಗೆ ವರ್ತಿಸುವಂತೆ ಕಲಿಸುತ್ತಿದೆ. ಬದಲಾವಣೆ ತರಲು ಮಹಿಳೆಯರು ಮತ್ತಷ್ಟು ಗಟ್ಟಿಯಾಗಿ ಸತ್ಯವನ್ನು ತಿಳಿಸಬೇಕಾಗಿದೆ ಎಂದು ಅಗತ್ಯವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.