ಮಂಗಳೂರು, ಅ13(SS): ಶರನ್ನವರಾತ್ರಿ ವೇಳೆ ಕರಾವಳಿ ಜನರಿಗೆ ಪಕ್ಕನೇ ನೆನಪಾಗುವುದು ಹುಲಿವೇಷ. ಕರಾವಳಿಯ ಪ್ರಸಿದ್ಧ ಜನಪದ ಕಲೆ ಇದು. ಹುಲಿವೇಷ ಕೇವಲ ಜನಪದ ಕಲೆಯಲ್ಲ. ದೈವ ಶಕ್ತಿ ಇರುವ ಅದ್ಭುತ ಕಲೆ. ದಸರಾ ಬಂತೆಂದರೆ ಸಾಕು, ಕರಾವಳಿಯಲ್ಲಿ ತಾಸೆಯ ಸದ್ದು ಕೇಳಲಾರಂಭಿಸುತ್ತದೆ. ತಾಸೆಯ ಬಡಿತದ ಸದ್ದಿಗೆ ಗತ್ತಿನಿಂದ ಹುಲಿಗಳು ಇಲ್ಲಿ ಹೆಜ್ಜೆ ಹಾಕುತ್ತದೆ. ಮಂಗಳೂರು ದಸರಾ ಉತ್ಸವ ಮತ್ತು ಮೆರವಣಿಗೆಯಲ್ಲಿ ಈ ಹುಲಿ ಕುಣಿತ ಜನರ ಕಣ್ಣು ಕುಕ್ಕುತ್ತದೆ.
ಸಾಮಾನ್ಯವಾಗಿ ಕಡಲತಡಿ ಮಂಗಳೂರಿನ ರಥ ಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನ, ಉರ್ವ ಮಾರಿಗುಡಿ, ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಸೇರಿದಂತೆ ನಗರದ ಬೀದಿ ಬೀದಿಗಳಲ್ಲಿ ಹುಲಿವೇಷಧಾರಿಗಳು ಕಾಣಸಿಗುತ್ತಾರೆ. ಈ ಹುಲಿ ವೇಷ ಇಲ್ಲದಿದ್ದರೆ ನವರಾತ್ರಿಗೆ ಕಲೆಯೇ ಇಲ್ಲ.
ಪಟ್ಟೆಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ, ಹೀಗೆ ನಾನಾ ರೀತಿಯಿಂದ ಕರೆಯಲ್ಪಡುವ ಈ ಹುಲಿಗಳ ತಾಸೆಯ ಸದ್ದಿಗೆ ಅಬ್ಬರದ ಹೆಜ್ಜೆಯನ್ನು ಗತ್ತಿನಿಂದ ಹಾಕುತ್ತದೆ. ಮಾತ್ರವಲ್ಲ, ಈ ಹುಲಿಗಳು ತೇಲ್ ಬಗ್ಗುನಿ, ಮಂಕಿ ಡೈ, ಎರಡು ಕೈಗಳಿಂದ ನಡೆಯುವುದು ಸೇರಿದಂತೆ ಬೇರೆ ಬೇರೆ ಕಸರತ್ತುಗಳನ್ನು ಮಾಡಿ ಜನರನ್ನು ಮೋಡಿ ಮಾಡುತ್ತದೆ.