ಮಂಗಳೂರು, ಅ13(SS): ದೇವರ ಲೀಲೆ ಪ್ರಸ್ತುತಪಡಿಸುವ, ಶ್ರೀ ಕ್ಷೇತ್ರಗಳ ಮಹಿಮೆ ಸಾರುವ ಅದೆಷ್ಟೋ ಭಕ್ತಿಗೀತೆಗಳನ್ನು ಕೇಳಿರುತ್ತೇವೆ. ತುಳುನಾಡಿನ ಜನರು ದೇವರು ಮಾತ್ರವಲ್ಲ, ದೈವಗಳ ಆರಾಧಕರೂ ಹೌದು. ಇಲ್ಲಿ ಅದೆಷ್ಟು ದೇವಸ್ಥಾನಗಳಿದೆಯೋ ಅಷ್ಟೇ ದೈವಸ್ಥಾನಗಳೂ ಕೂಡ ಇದೆ. ಇಲ್ಲಿನ ಜನರು ಕಲ್ಲುರ್ಟಿ, ಕಲ್ಕುಡ, ಕೊಡಮಂದಾಯಿ, ಮಂತ್ರದೇವತೆ, ಪಂಜುರ್ಲಿ, ಕೊರಗಜ್ಜ ಹೀಗೆ ನೂರಾರು ದೈವಗಳನ್ನು ನಂಬಿಕೊಂಡು ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ ಇಂತಹ ದೈವಸ್ಥಾನಗಳ ಕ್ಷೇತ್ರ ಮಹಿಮೆ ಸಾರುವ ಭಕ್ತಿಗೀತೆಗಳು ಇರುವುದು ಅಪರೂಪದಲ್ಲಿ ಅಪರೂಪ. ಅಂತಹ ವಿಭಿನ್ನ ಪ್ರಯತ್ನವೊಂದು ಮೂಡುಬಿದಿರೆ ಸಮೀಪದ ತೋಡಾರು ಗ್ರಾಮದ ಶ್ರೀ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದಿದೆ.
ಚಿತ್ರ ಕೃಪೆ – ಅನೂಪ್ ಸೂರಿಂಜೆ
ಈ ಕ್ಷೇತ್ರದ ಕಾರಣಿಕವನ್ನು ಕಟ್ಟಿಕೊಡುವ ರೀತಿಯಲ್ಲಿ ಭಕ್ತಿಗೀತೆಯ ಗೊಂಚಲನ್ನು ಸಮರ್ಪಿಸಲಾಗಿದೆ. ‘ತೋಡಾರ್ದ ತುಡರ್’ ಅನ್ನುವ ತುಳು ಭಕ್ತಿಗೀತೆಗಳ ಆಲ್ಬಂನ ಮೂಲಕ ತೋಡಾರಿನ ಭಂಡಾರಮನೆ ಕುಟುಂಬದ ಲೋಕೇಶ್ ಶೆಟ್ಟಿ, ಲೋಹಿತ್ ಶೆಟ್ಟಿ ಹಾಗೂ ರೇಶ್ಮಾ ಶೆಟ್ಟಿ ಸಾಹಿತ್ಯ ಬರೆದು ಈ ತುಳು ಭಕ್ತಿಗೀತೆಗಳನ್ನು ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ.
ತುಳುನಾಡಿನ ರಾಜನ್ ದೈವ ಎಂದೇ ಕರೆಯಲ್ಪಡುವ ಕೊಡಮಣಿತ್ತಾಯ ದೈವದ ಕುರಿತಾಗಿ, ತೋಡಾರು ಕ್ಷೇತ್ರದ ಕಾರಣಿಕ ಸಾರುವ 6 ತುಳು ಭಕ್ತಿಗೀತೆಗಳು ಈ ಆಲ್ಬಂನಲ್ಲಿದೆ. ಮಂಗಳೂರಿನ ಸಂದೇಶ ಬಾಬು ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಒಂದಕ್ಕಿಂತ ಒಂದು ಮಧುರವಾಗಿದೆ. ಸಂದೇಶ್ ಬಾಬು ಅವರ ಚೊಚ್ಚಲ ನಿರ್ದೇಶನದ ಭಕ್ತಿಗೀತೆಯ ಧ್ವನಿಸುರುಳಿ ಇದಾಗಿದ್ದರೂ ಅದ್ಭುತವಾಗಿ ಮೂಡಿಬಂದಿದ್ದು ಈಗಾಗಲೇ ಜನಪ್ರಿಯತೆ ಪಡೆದಿದೆ.
ಇನ್ನು ಕರಾವಳಿಯ ಖ್ಯಾತ ಗಾಯಕ, ಝೀ ಕನ್ನಡ ವಾಹಿನಿಯ ಸರಿಗಮಪ – 15 ರಿಯಾಲಿಟಿ ಶೋನಲ್ಲಿ ಛಾಪು ಮೂಡಿಸುತ್ತಿರುವ ನಿಹಾಲ್ ತಾವ್ರೋ 2 ಹಾಡಿಗೆ ಧ್ವನಿ ನೀಡಿದ್ದು ಜನಮೆಚ್ಚುಗೆ ಗಳಿಸಿದೆ. ಉಳಿದಂತೆ ಜಗದೀಶ್ ಆಚಾರ್ಯ ಪುತ್ತೂರು, ಧನಂಜಯ್ ವರ್ಮಾ, ನೇಹಾ ಬೇಕಲ್, ವಿದ್ಯಾ ಸುವರ್ಣ ಹಾಗೂ ಸಂತೋಷ್ ಕುಂಬ್ಳೆ ತುಳು ಭಕ್ತಿಗೀತೆಗಳಿಗೆ ಧ್ವನಿ ನೀಡಿದ್ದು ಸುಮುಧುರವಾಗಿ ಮೂಡಿಬಂದಿದೆ.
ಮಂಗಳೂರಿನ ಪ್ರಸಿದ್ಧ ದಾಯ್ಜಿವರ್ಲ್ಡ್ ಆಡಿಯೋ ವಿಶ್ಯುವಲ್ ಪ್ರೈ.ಲಿ. ಸ್ಟುಡಿಯೋದಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಲಾಗಿದೆ. ಈಗಾಗಲೇ ಈ ತುಳು ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆಯಾಗಿದ್ದು ಇದೀಗ ‘ಭಂಡಾರ ಕ್ರಿಯೇಷನ್ಸ್’ ಎಂಬ ಲಾಂಛನದಡಿ ನಿರ್ಮಿಸಲಾದ ತಮ್ಮದೇ ಯೂಟ್ಯೂಬ್ ಚ್ಯಾನೆಲ್ ನಲ್ಲಿ ಈ ಭಕ್ತಿಗೀತೆಗಳ ವಿಡಿಯೋ ಸಾಂಗ್ಸ್ ಅಪ್ಲೋಡ್ ಮಾಡಲಾಗಿದೆ.
‘ಭಂಡಾರ ಕ್ರಿಯೇಷನ್ಸ್’ ಲೋಗೋ ಕೂಡ ವಿಭಿನ್ನ ಥೀಮ್ ಮೂಲಕ ಅನಾವರಣಗೊಳಿಸಲಾಗಿದೆ. ಬಹುಶಃ ಇದೊಂದು ವಿಭಿನ್ನ ಪ್ರಯತ್ನವೂ ಹೌದು. ಯೂಟ್ಯೂಬ್ ನಲ್ಲಿ ಭಂಡಾರ ಕ್ರಿಯೇಷನ್ಸ್ ಅಂತ ಸರ್ಚ್ ಮಾಡಿದರೆ ಈ ಎಲ್ಲಾ ಭಕ್ತಿಗೀತೆಗಳನ್ನು ಕೇಳಬಹುದಾಗಿದೆ. ಕೊಡಮಣಿತ್ತಾಯ ತುಳು ಭಕ್ತಿಗೀತೆಗಳ ವಿಡಿಯೋ ಸಾಂಗ್ಸ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.....
https://www.youtube.com/bhandaracreations