ಮಂಗಳೂರು,ಅ 14(MSP): 2016ರಲ್ಲಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣವೊಂದರಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಮತ್ತು ಮಾವ ವಿರೋಧವಾಗಿ ಸಾಕ್ಷ್ಯ ಹೇಳಿದ್ದರೂ, ವೈದ್ಯಕೀಯ ವರದಿ ಮತ್ತು ಶಿಕ್ಷಕಿಯ ಹೇಳಿಕೆ ಆಧಾರದಲ್ಲಿ ಆರೋಪಿಯನ್ನು ದೋಷಿ ಎಂದು ಸಾರಿರುವ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ, ಅಪರಾಧಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಮಂಗಳೂರು ತಾಲ್ಲೂಕಿನ ಕೊಕುಡೆ ಗ್ರಾಮದ ಹರಿಪಾದೆ ನಿವಾಸಿ ರಮೇಶ್ (34) ಶಿಕ್ಷೆಗೊಳಗಾಗಿರುವ ವ್ಯಕ್ತಿ. ಈತನಿಗೆ ಸಂತ್ರಸ್ತ ಬಾಲಕಿಯ ತಾಯಿಯೊಂದಿಗೆ ಸಲುಗೆಯಿತ್ತು.. ಹೀಗಾಗಿ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದ ರಮೇಶ್, ಬಾಲಕಿ ಮೇಲೆಯೂ ಅತ್ಯಾಚಾರ ನಡೆಸಿದ್ದ. ಆದರೆ ಸಂತ್ರಸ್ತೆ ಈ ವಿಚಾರವನ್ನು ಭಯಬೀತಗೊಂಡು ಯಾರಲ್ಲೂ ಹೇಳಿರಲಿಲ್ಲ
ಸ್ವಲ್ಪ ಸಮಯದ ನಂತರ ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಶಿಕ್ಷಕಿ ಬಳಿ ಸಂತ್ರಸ್ತೆ ತನ್ನ ಮೇಲೆ ನಡೆದಿರುವ ದೌರ್ಜನ್ಯದ ವಿಚಾರವನ್ನು ಹಂಚಿಕೊಂಡಿದ್ದಳು. ಇದರಿಂದ ತಕ್ಷಣ ಶಿಕ್ಷಕಿ ಬಾಲಕಿಯನ್ನು ಮೂಲ್ಕಿ ಪೊಲೀಸ್ ಠಾಣೆಗೆ ಕರೆದೊಯ್ದ ದೂರು ಕೊಡಿಸಿದ್ದರು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವೈದ್ಯಕೀಯ ಪರೀಕ್ಷೆ ನಡೆಸಿ, ವರದಿ ಪಡೆದಿದ್ದರು.
ಬಾಲಕಿ ಮತ್ತು ಶಿಕ್ಷಕಿಯ ಹೇಳಿಕೆ, ವೈದ್ಯಕೀಯ ವರದಿ ಸೇರಿದಂತೆ ಹಲವು ಸಾಕ್ಷ್ಯಾಧಾರಗಳೊಂದಿಗೆ ಮೂಲ್ಕಿ ಠಾಣೆಯ ಆಗಿನ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆಯ ತಾಯಿ ಮತ್ತು ಆಕೆಯ ಮಾವ ವಿಚಾರಣೆ ವೇಳೆ ರಮೇಶ್ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದರು. ಆದರೆ, ಶಿಕ್ಷಕಿ ಬಲವಾಗಿ ಸಾಕ್ಷ್ಯ ನುಡಿದಿದ್ದರು.
ಅ.೧೧ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ, ರಮೇಶ್ ಅಪರಾಧಿ ಎಂದು ತೀರ್ಮಾನ ಪ್ರಕಟಿಸಿದರು. ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25,000 ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ 20,000ವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದರು. ಸಂತ್ರಸ್ತರ ಪರಿಹಾರ ನಿಧಿಯಿಂದಲೂ ನೆರವು ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವೆಂಕಟರಮಣ ಸ್ವಾಮಿ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಿದ್ದರು. 15 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.