ಹೊಸಪೇಟೆ,ಅ 14(MSP): ಬಳ್ಳಾರಿಗೆ ಯಾವುದೇ ನಾಯಕರು ಬರಲಿ, ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ಈ ಉಪಚುನಾವಣೆಯಲ್ಲಿ ಮಣ್ಣಿನ ಮಗಳಾದ ಜೆ.ಶಾಂತ ಗೆಲ್ಲುತ್ತಾರೋ ಅಥವಾ ಕನಕಪುರದ ಡಿಕೆಶಿ ಗೆಲ್ಲುತ್ತಾರೋ ನೋಡೋಣ ಎಂದು ಶಾಸಕ ಬಿ. ಶ್ರೀರಾಮುಲು ಸವಾಲು ಹಾಕಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಡಿಕೆಶಿ ಕುತಂತ್ರ ಮಾಡಿ ಗೆದ್ದಿದ್ದಾರೆ. ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಭವಿಷ್ಯ ಬದಲಿಸುವ ಮಾತುಗಳನ್ನು ಅಹಂಕಾರದಿಂದ ಆಡುತ್ತಿದ್ದಾರೆ. ಆದರೆ, ಅವರ ಭವಿಷ್ಯದ ಬಗ್ಗೆ ಅವರಿಗೇನೆ ಗೊತ್ತಿಲ್ಲ. ದುಡ್ಡಿನ ಅಹಂನಿಂದ ಅವರು ಮೆರೆದಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅದು ನಡೆಯುವುದಿಲ್ಲ ಎಂದು ಅವರಿಗೆ ತಿಳಿದಿಲ್ಲ’ ಎಂದರು.
ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ‘ಮೈತುಂಬಾ ಭ್ರಷ್ಟಾಚಾರ ಪ್ರಕರಣಗಳನ್ನು ಮೇಲೆಳಿದುಕೊಂಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲ’ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.
ಸಮಾಜಕ್ಕೆ ಶಿವಕುಮಾರ್ ಏನು ಕೊಡುಗೆ ನೀಡಿದ್ದಾರೆ. ಒಂದಾದರೂ ಜನಪರ ಹೋರಾಟ ಮಾಡಿದ್ದಾರೆಯೇ? ಅಕ್ರಮವಾಗಿ ಸಂಪಾದಿಸಿದ ಹಣದಿಂದ ಬಳ್ಳಾರಿಯಲ್ಲಿ ಚುನಾವಣೆ ಮಾಡಲು ಹೊರಟಿದ್ದಾರೆ. ಆದರೆ, ಉಪಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೆ ಎಂಬುದನ್ನು ನೋಡುತ್ತೇನೆ’ ಎಂದು ಸವಾಲು ಹಾಕಿದರು. ದೇವರು ನನ್ನ ಪಾಲಿಗೆ ಕಣ್ಣು ತೆರೆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೆಸೆಯುವ ತಾಕತ್ತು ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.