ನವದೆಹಲಿ, ಅ 14(MSP): ಲೈಂಗಿಕ ಶೋಷಣೆ ವಿರುದ್ದ ನಡೆಯುತ್ತಿರುವ ಮೀ ಟೂ ಆಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಎಂ.ಜೆ.ಅಕ್ಬರ್ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನೈಜಿರೀಯಾ ಪ್ರವಾಸಕ್ಕೆ ತೆರಳಿದ್ದ ಅಕ್ಬರ್ ಅವರು ದೆಹಲಿಗೆ ಆಗಮಿಸಿ ಇ ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ, ಅಕ್ಬರ್ ಅವರ ರಾಜೀನಾಮೆ ಕುರಿತ ವರದಿಗಳಿಗೆ ಕೇಂದ್ರ ಸರ್ಕಾರ ಈ ವರೆಗೂ ಯಾವುದೇ ರೀತಿಯ ಅಧಿಕೃತ ಸ್ಪಷ್ಟನೆಗಳನ್ನು ನೀಡಿಲ್ಲ.
ಅಕ್ಬರ್ ಅವರು ಪತ್ರಕರ್ತರಾಗಿದ್ದಾಗ ಹಲವಾರು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕವಾಗಿ ಶೋಷಣೆ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಆರೋಪದ ಹಿನ್ನಲೆಯಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಡಗಳು ಹೆಚ್ಚಾಗತೊಡಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾತನಾಡಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದಿದ್ದರು.
ಕೇಂದ್ರ ಸಚಿವ ಅಕ್ಬರ್ 2007 ರಲ್ಲಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಅಮೆರಿಕಾ ಮೂಲದ ಪತ್ರಕರ್ತೆ ಟ್ವೀಟ್ ನಲ್ಲಿ ಕಿಡಿಕಾರಿದ್ದರು. ಇದಲ್ಲದೆ ಅಕ್ಬರ್ ವಿರುದ್ಧ 13 ಆರೋಪಗಳೂ ಕೂಡ ಕೇಳಿಬಂದಿದ್ದವು.