ಉಡುಪಿ, ಅ 14(MSP): ಸೌದಿ ಅರೇಬಿಯದಲ್ಲಿ 3 ತಿಂಗಳ ಹಿಂದೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ನರ್ಸ್ ಹೆಝಲ್ ಜ್ಯೋತ್ಸ್ನಾ ಕ್ವಾಡರ್ಸ್ (29) ಪ್ರಕರಣದಲ್ಲಿ ಸೌದಿ ಸರ್ಕಾರ ಸತ್ಯಾ ವಿಚಾರವನ್ನು ಮರೆಮಾಚಿದೆ. ಅಲ್ಲದೆ ಜೆದ್ದಾದ ಭಾರತೀಯ ರಾಯಭಾರ ಕಚೇರಿ ಸೂಕ್ತ ದಾಖಲೆಗಳನ್ನು ಕಳುಹಿಸಿಕೊಡದೆ ಅನ್ಯಾಯ ಮಾಡಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್ ಶಾನುಭಾಗ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಶನಿವಾರ ಹೆಝಲ್ ಪೋಷಕರೊಂದಿಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಕಳೆದ ಆರು ವರ್ಷಗಳಿಂದ ಅಲ್ ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹೆಝಲ್ ಆತ್ಮಹತ್ಯೆಯೋ ಕೊಲೆಯೋ ಎಂಬ ಸಂಶಯ ಜೀವಂತವಾಗಿದೆ ಎಂದರು.
ಸೌದಿ ಸರ್ಕಾರ ಹೆಜೆಲ್ ಸಾವಿನ ನಿಜಾಂಶ ತಿಳಿಸಬೇಕು. ಕಾನೂನು ಪ್ರಕಾರ ಸಾವಿಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡಿಲ್ಲ. ಮರಣೋತ್ತರ ಪರೀಕ್ಷಾ ವರದಿ, ಹೆಝಲ್ ಬರೆದ ಡೆತ್ ನೊಟ್ ಪ್ರತಿ, ಉದ್ಯೋಗ ದಾಖಲೆ, ವಿಮೆ ದಾಖಲೆ, ಸಾವಿನ ಪ್ರಕರಣದ ದೋಷಾರೋಪ ಪಟ್ಟಿಯಂತಹ ದಾಖಲೆಗಳು ಯಾವುದನ್ನೂ ಕೂಡಾ ನೀಡಿಲ್ಲ. ಆತ್ಮಹತ್ಯೆ ಎಂದು ವೈದ್ಯರ ವರದಿಯನ್ನು ಮತ್ತು ಪೂರಕ ಪೊಲೀಸ್ ವರದಿಯನ್ನು ರಾಯಭಾರ ಕಚೇರಿಯವರು ಕಳುಹಿಸಿದ್ದಾರೆ. ಸೌದಿಯಲ್ಲಿ ಉದ್ಯೋಗದಲ್ಲಿರುವವರಿಗೆ ವಿಮೆ ಕಡ್ಡಾಯ. ಹೆಝಲ್ ಬ್ಯಾಂಕ್ ಖಾತೆ ಕುರಿತೂ ಮಾಹಿತಿ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿದ್ದ ರಾಯಭಾರ ಕಚೇರಿ ಅಧಿಕಾರಿಗಳು ಕೂಡಾ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಹೆಝಲ್ ಡೆತ್ ನೋಟ್ ನಲ್ಲಿ ಹೆಸರಿಸಿರುವ ಇಬ್ರಾಹಿಂ ಎಂಬ ವ್ಯಕ್ತಿಯು ಹೆಝಲ್ ಸಾವಿಗೆ ಕಾರಣವೆಂದು ಪ್ರತಿಷ್ಠಾನಕ್ಕೆ ಕಂಡುಬಂದಿದೆ. ಡೆತ್ ನೋಟ್ ನ್ನು ಇಂಗ್ಲಿಷ್ ಲಿಪಿಯಲ್ಲಿ ಕೆಥೊಲಿಕ್ ಕೊಂಕಣಿ ಭಾಷೆಯಲ್ಲಿ ಬರೆದಿದ್ದಾರೆ. ಈತನಿಗೆ ಈಗಾಗಲೇ ಮೂರು ದಿನಗಳ ಹಿಂದೆ ಜಾಮೀನು ದೊರಕಿ ಬಹಿರಂಗವಾಗಿ ತಿರುಗಾಡುತ್ತಿದ್ದಾನೆಂದು ತಿಳಿದುಬಂದಿದೆ. ಸೌದಿ ಕಾನೂನಿನ ಪ್ರಕಾರ ಹೆಝಲ್ ಸಾವಿಗೆ ಸೂಕ್ತ ಪರಿಹಾರ ದೊರಕಬೇಕು. ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ತೀರ್ಪು ಬಂದಿದೆಯೋ? ಇಲ್ಲವೋ ಎಂದು ತಿಳಿದಿಲ್ಲ. ಇದನ್ನು ರಾಯಭಾರ ಕಚೇರಿಯವರು ಕುಟುಂಬಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪತಿ ಅಶ್ವಿನ್ ಮಥಾಯಿಸ್, ತಾಯಿ ಹೆಲೆನ್ ಕ್ವಾಡ್ರಸ್, ತಾಯಿ ರಾವರ್ಟ್ ಕ್ವಾಡರ್ಸ್ ಮುಂತಾದವರು ಉಪಸ್ಥಿತರಿದ್ದರು.