ಸುಬ್ರಮಣ್ಯ,ಅ 15 (MSP): ಕುಕ್ಕೆ ಸುಬ್ರಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಶನಿವಾರದಿಂದ ಆರಂಭಿಸಿರುವ ಉಪವಾಸ ಅ. 15 ರ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಈ ವಿಚಾರವು ನಾನಾ ತಿರುವು ಪಡೆದುಕೊಂಡಿದೆ. ಶ್ರೀಗಳ ಉಪವಾಸದ ಬಗ್ಗೆ ಉಡುಪಿಯ ಅಷ್ಟಮಠಗಳು ಕಳವಳ ವ್ಯಕ್ತಪಡಿಸಿದ್ದು, ಶ್ರೀಗಳ ಬೆಂಬಲಕ್ಕೆ ನಿಂತಿವೆ. ಈ ನಡುವೆ ಉಡುಪಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿ ಭಾನುವಾರ ಕುಕ್ಕೆ ಸುಬ್ರಮಣ್ಯ ಸಂಪುಟ ಶ್ರೀ ನರಸಿಂಹ ಮಠಕ್ಕೆ ಭೇಟಿ ನೀಡಿ ನಿರಶನ ನಿರತ ಶ್ರಿ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಕ್ಷೇಮ ವಿಚಾರಿಸಿದ್ದಾರೆ.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು , "ಕೆಲವರು ಸುಬ್ರಮಣ್ಯ ಶ್ರೀಗಳಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದಾರೆ. ಮನನೊಂದು ಉಪವಾಸದ ದಾರಿ ಹಿಡಿದಿದ್ದು ಇದು ಅಘಾತಕಾರಿ ಎಂದು ಶ್ರೀ ಈಶ ಪ್ರಿಯ ತೀರ್ಥರು ಈ ಸಂದರ್ಭದಲ್ಲಿ ತಿಳಿಸಿದರು. ಸನಾತನ ಪರವಾಗಿ ಎಲ್ಲಾ ಮಠದ ಯತಿಗಳು ಶ್ರೀಗಳ ಬೆಂಬಲಕ್ಕೆ ಇದ್ದೇವೆ. ಧರ್ಮಗುರುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಶ್ರೀಗಳ ಮಾನಸಿಕ ಹಿಂಸೆ ನೀಡುವಂತ ಪ್ರವೃತ್ತಿ ಸರಿಯಲ್ಲ .ಈ ಷಡ್ಯಂತ್ರ್ಯದ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ. ಎಲ್ಲಾ ಮಠಾಧೀಶರ ಪರವಾಗಿ ಬೆಂಬಲ ಸೂಚಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು. ಸ್ವಾಮೀಜಿ ಸಮಾಜಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದರೂ ಕೂಡಾ ಅವರ ಮನಸ್ಸಿಗೆ ನೋವು ನೀಡಿದ್ದಾರೆ ಇದು ಸರಿಯಲ್ಲ ಎಂದರು.
ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಅವರ ಉಪವಾಸದ ಎರಡನೇ ದಿನವಾದ ಭಾನುವಾರ ಒಂದು ಲೋಟ ನೀರನ್ನು ಮಾತ್ರ ಸೇವಿಸಿ ಉಪವಾಸ ಮುಂದುವರಿಸಿದ್ದಾರೆ. ಇದಲ್ಲದೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಕಾಳಿ ಮಠದ ಶ್ರೀ ಖುಷಿ ಕುಮಾರ ಸ್ವಾಮಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಉಪವಾಸಕ್ಕೆ ಬೆಂಬಲ ಸೂಚಿಸಿದರು