ಮಂಗಳೂರು, ಅ 15(SM): ನಗರದಲ್ಲಿ ಪ್ರಯಾಣಿಸುವ ಸಿಟಿ ಬಸ್ ಗಳ ಕರ್ಕಶ ಹಾರ್ನ್ ಹಾಗೂ ಟಿಕೆಟ್ ನೀಡದೆ ಪ್ರಯಾಣಿಕರಿಗೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಪ್ರಾಧಿಕಾರಕ್ಕೆ ಸಾರ್ವಜನಿಕರು ದೂರನ್ನು ನೀಡಿದ್ದರು. ಅದರಂತೆ ಸೋಮವಾರದಂದು ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು, ಸುಮಾರು 30ಕ್ಕೂ ಅಧಿಕ ಬಸ್ ಗಳ ವಿರುದ್ಧ ಕ್ರಮ ಜರಗಿಸಿದ್ದಾರೆ.
ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು, ಕರ್ಕಶ ಹಾರ್ನ್ ಗಳ ಮೂಲಕ ಜನತೆಗೆ ತೊಂದರೆಯನ್ನುಂಟು ಮಾಡುವ ಹಾಗೂ ಟಿಕೆಟ್ ನೀಡದೆ ವಂಚಿಸುತ್ತಿರುವ ಬಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಬಸ್ ಗಳನ್ನು ನಗರದ ನೆಹರು ಮೈದಾನದಲ್ಲಿ ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಹಾಗೂ ದಂಡವನ್ನು ಕೂಡ ವಿಧಿಸಲಾಯಿತು.
ಅಲ್ಲದೆ ಹಲವು ಬಸ್ ಗಳ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.
ಇನ್ನು ನಗರದಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಸುಲಭ ಸಂಪರ್ಕಕ್ಕಾಗಿ ನೂರಾರು ಖಾಸಗಿ ಬಸ್ ಗಳು ಜನತೆಗೆ ಸೇವೆಯನ್ನು ಕಲ್ಪಿಸುತ್ತಿವೆ. ಗ್ರಾಮೀಣ ಭಾಗದ ಅದೆಷ್ಟೋ ಜನತೆಗೆ ನಗರದತ್ತ ಪ್ರಯಾಣ ಬೆಳೆಸಲು ಖಾಸಗಿ ಬಸ್ ಗಳು ನೆರವಾಗುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ ಗಳ ದರ್ಬಾರ್ ನಗರದಲ್ಲಿ ಹೆಚ್ಚುತ್ತಿದೆ. ಸರಕಾರಿ ಬಸ್ ಗಳೊಂದಿಗೆ ಪೈಪೋಟಿ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ಇದರ ವಿರುದ್ಧ ನಿರಂತರ ದೂರುಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.