ಪುತ್ತೂರು, ಅ 16 (MSP): ದುಷ್ಕರ್ಮಿಯೊಬ್ಬ ಮನೆ ಸಮೀಪ ಸ್ಪೋಟಕ ಸಿಡಿಸಿದ ಪರಿಣಾಮ ಮನೆ ಮಂದಿ ಗಂಭೀರ ಗಾಯಗೊಂಡ ಘಟನೆ ಅ. 15 ರ ಮತ್ತು 16 ರ ನಡುವೆ ತಡ ರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ. ಘಟನೆಯಿಂದ ಮನೆಯಲ್ಲಿದ್ದ ನಾರಾಯಣ ಪ್ರಸಾದ್ ಮತ್ತು ಅವರ ಪತ್ನಿ ಶಾಲಿನಿ(35 ) ರವರಿಗೆ ಗಾಯವಾಗಿದೆ. ಶಾಲಿನಿ ಅವರ ಕಾಲಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಅ. 15 ರ ತಡರಾತ್ರಿ, ನಾರಾಯಣ ಪ್ರಸಾದ್ ಮನೆ ಬಳಿ ಬಂದ ದುಷ್ಕರ್ಮಿಯೊಬ್ಬ ಉದ್ದೇಶ ಪೂರ್ವಕವಾಗಿ ಬಂಡೆಗಳನ್ನು ಒಡೆಯಲು ಬಳಸುವ ಜಿಲೆಟಿನ್ ಸ್ಪೋಟಕವನ್ನು ಮನೆಯ ಹೊರಗೆ ನಾಲ್ಕು ಕಡೆಯಲ್ಲಿ ಫಿಕ್ಸ್ ಮಾಡುವ ಸಂದರ್ಭದಲ್ಲಿ ಆತನ ಓಡಾಟದ ಶಬ್ದಕ್ಕೆ ಮನೆ ಮಂದಿ ಎಚ್ಚರಗೊಂಡಿದ್ದಾರೆ. ಶಬ್ದ ಬಂದ ಹಿನ್ನಲೆಯಲ್ಲಿ ಶಾಲಿನಿ ಅವರು ಲೈಟ್ ಹಾಕಿ ಬಾಗಿಲು ತೆರೆಯುವಷ್ಟರಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಸ್ಪೋಟಕಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಇದೇ ವೇಳೆ ಸ್ಪೋಟಕ ಸಿಡಿದ ಪರಿಣಾಮ ಶಾಲಿನಿ ಗಂಭೀರ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.