ಕುಂದಾಪುರ,ಅ 16 (MSP): ಹೊಟೇಲ್ ಕೆಲಸಕ್ಕೆ ಜನ ಮಾಡಿಕೊಡುತ್ತೇವೆ ಎಂದು ನಂಬಿಸಿ ಕರೆಸಿಕೊಂಡು ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಬೆರೆಸಿ ಹೊಟೇಲ್ ಉದ್ಯಮಿ ಕುಂದಾಪುರ ಸಮೀಪದ ಇಡೂರು ಕುಂಜ್ಞಾಡಿ ಗ್ರಾಮದ ಹೊರಟ್ಟಿ ಗ್ರಾಮದ ನಿವಾಸಿ ಚಂದ್ರಶೇಖರ ಶೆಟ್ಟಿ (40) ಅವರನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಗೈಯಲಾಗಿದೆ.
ಚಂದ್ರಶೇಖರ ಶೆಟ್ಟಿ
ಪ್ರಕರಣದ ಹಿನ್ನಲೆ:
ಚಂದ್ರಶೇಖರ್ ಶೆಟ್ಟಿ ಬೈಲಹೊಂಗಲದಲ್ಲಿ ಮೊದಲು ಬೀಡಾ ಅಂಗಡಿ ಹೊಂದಿದ್ದರು. ಸಹೋದರನ ನೆರವಿನಿಂದ ಇತ್ತೀಚೆಗೆ ತಾನೆ ಬಸ್ ಸ್ಟಾಂಡ್ ಬಳಿ ಸಸ್ಯಹಾರಿ ಹೊಟೇಲ್ ಆರಂಭಿಸಿದ್ದರು. ಇದು ಅಲ್ಪ ಅವಧಿಯಲ್ಲಿಯೇ ಉತ್ತಮವಾಗಿ ವ್ಯಾಪಾರ ಹೊಂದಿ ಅಭಿವೃದ್ದಿಯಾಗುತ್ತಿತ್ತು. ಕಿರಿಯ ಸಹೋದರ ನಾಗರಾಜ್ ಶೆಟ್ಟಿ ಉಧ್ಯಮ ಮುನ್ನಡೆಸುತ್ತಿದ್ದರು.
ಅ.6 ರಂದು ಬೆಳಿಗ್ಗೆ ಹೋಟೆಲ್ಗೆ ಚಹಾ ಕುಡಿಯಲು ಬಂದಿದ್ದ ಅಪರಿಚಿತ ವ್ಯಕ್ತಿ ಹೋಟೆಲ್ಗೆ ಕೆಲಸಗಾರರನ್ನು ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಕೆಲಸಗಾರ ಅಗತ್ಯ ಇದ್ದಲ್ಲಿ ಸಮೀಪದ ಸಂಗೊಳ್ಳಿ ಡಾಬಾ ಬಳಿ ಬರುವಂತೆ ವ್ಯಕ್ತಿ ಮಾಹಿತಿ ನೀಡಿದ್ದರು . ಅ.8 ರಂದು ಬೆಳಿಗ್ಗೆ ಕೆಲಸಗಾರರನ್ನು ಬಗ್ಗೆ ಮಾತನಾಡಿ ಬರಲು ಸಂಗೊಳ್ಳಿಗೆ ಹೋಗುವುದಾಗಿ ಪತ್ನಿ ಬಳಿ ಹೇಳಿ ಹೋಗಿದ್ದರು.ಆದರೆ ಸ್ಥಳಕ್ಕೆ ತಲುಪುವ ಮೊದಲೇ ಕೆಲಸಗಾರರನ್ನು ಮಾಡಿಕೊಡುತ್ತೇನೆ ಎಂದಿದ್ದ ವ್ಯಕ್ತಿ ಮತ್ತು ಆತನ ಸಹಚರರು ಭೇಟಿಯಾಗಿ ತಂಪು ಪಾನೀಯ ಕುಡಿಯಲು ನೀಡಿದ್ದಾರೆ. ಈ ವೇಳೆಯಲ್ಲಿ ಅವರಿಗೆ ತಂಪು ಪಾನೀಯದ ರುಚಿ ಬದಲಾವಣೆ ಇರೋದ್ರಿಂದ ಅದನ್ನು ಬಿಸಾಡಲು ಪ್ರಯತ್ನಿಸಿದಾಗ ಒತ್ತಾಯ ಪೂರ್ವಕವಾಗಿ ಕುಡಿಸಿದ್ದಾರೆ.
ಅವರಿಂದ ತಪ್ಪಿಸಿಕೊಂಡು ಬಂದಿದ್ದ ಚಂದ್ರಶೇಖರ ಶೆಟ್ಟಿ ಅವರು ದಾರಿ ಪಕ್ಕದ ಸೇತುವೆ ಬಳಿ ನಿತ್ರಾಣವಾಗಿ ಬಿದ್ದಿದ್ದನ್ನು ದಾರಿ ಹೋಕರು ನೋಡಿ, ಅವರ ಜೇಬಿನಲ್ಲಿದ್ದ ಮೊಬೈಲ್ನಿಂದ ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಹೋದರ ನಾಗರಾಜ್ ಹಾಗೂ ಇತರರು ಕೂಡಲೇ ಸ್ಥಳಕ್ಕೆ ತೆರಳಿ ಅವರನ್ನು ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಬೆಳಗಾವಿ ಆಸ್ಪತ್ರೆಗೆ ದಾಖಲಿಸಿದ್ದರು. 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಚಂದ್ರ ಶೇಖರ ಶೆಟ್ಟಿ ಶನಿವಾರ ಮೃತಪಟ್ಟಿದ್ದಾರೆ. ಭಾನುವಾರ ಅವರ ಊರಿಗೆ ಶವ ತಂದು ಅಂತ್ಯಕ್ರಿಯೆ ನಡೆಸಲಾಗಿದೆ. ಮೃತರಿಗೆ ಪತ್ನಿ ಹಾಗೂ 3 ವರ್ಷದ ಗಂಡು ಮಗು ಇದೆ.
ಶಾಂತ ಸ್ವಭಾವದ ಅವರಿಗೆ ಯಾವುದೇ ಶತ್ರುಗಳು ಇರಲಿಲ್ಲ. ವ್ಯವಹಾರಿಕ ವೈಷಮ್ಯವೇ ಘಟನೆಗೆ ಕಾರಣ ಇರಬಹುದೆ ಎಂಬ ಶಂಕೆಯನ್ನು ಅವರ ಬಂಧಿಗಳು ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಎಸ್.ಪಿ ಸುಧೀರ್ಕುಮಾರ ರೆಡ್ಡಿ ಮಾಹಿತಿ ಕಲೆ ಹಾಕಿದ್ದು, ತನಿಖೆಗೆ ಆದೇಶ ನೀಡಿದ್ದಾರೆ. ಡಿವೈಎಸ್ಪಿ ಕರುಣಾಕರ ಶೆಟ್ಟಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಮಂಜು ನಾಥ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.