ಮಂಗಳೂರು, ಅ 16 (MSP): ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿಮೊಗರು ಗ್ರಾಮದ ಕಡೆಕಾರ್ ಎಂಬಲ್ಲಿರುವ ರಿವರ್ ಡೇಲ್ ಸಮೀಪ ನೇತ್ರಾವತಿ ನದಿ ಕಿನಾರೆ ಬಳಿ ಸಾರ್ವಜನಿಕ ಸ್ಧಳದಲ್ಲಿ ಉಲಾಯಿ- ಪಿದಾಯಿ (ಅಂದರ್ ಬಾಹರ್ ಜೂಜಾಟ) ಆಡುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಖಚಿತ ಮಾಹಿತಿಯನ್ನಾಧರಿಸಿ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸೋಮೇಶ್ವರದ ಯತಿಂಖಾನ ಬಳಿಯ ಕುಂಪಲ ನಿವಾಸಿ ನಾಸಿರ್ (52),ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಫಾರೂಕ್ (54),ಕುಂಜತ್ ಬೈಲ್ ಮರಕಡ ನಿವಾಸಿ ತಯ್ಯೂಬ್ ಹುಸೈನ್ (50), ಬೋಳೂರು ಕಟ್ಟೆ ತಿಂಗಳಾಯ ಕಂಪೌಂಡ್ ನಿವಾಸಿ ಪ್ರಶಾಂತ್ (34), ಉಳ್ಳಾಲ ನಿವಾಸಿ ಅಬ್ದುಲ್ ಲತೀಫ್ (55), ಬೆಂದೂರಿನ ನಿವಾಸಿ ನೈಜಿಲ್ ಮೊಂತೆರೋ(36), ಹಾಗೂ ಬೋಳಾರ ಎಮ್ಮೆಕೆರೆ ನಿವಾಸಿ ಝಮೀರ್ ಅಹ್ಮದ್ (42) ಎಂದು ಗುರುತಿಸಲಾಗಿದೆ.ಆರೋಪಿಗಳಿಂದ ಆರು ಮೊಬೈಲ್ ಫೋನ್ ಗಳು, ಜೂಜಾಟಕ್ಕೆ ಬಳಸಿದ 30,090 ರೂ. ನಗದು, ಆಟಕ್ಕೆ ಬಳಸಿದ 52 ಇಸ್ಪೀಟ್ ಕಾರ್ಡ್ ಗಳು ಹಾಗೂ ನಾಲ್ಕು ಬೈಕ್ ಗಳು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಹಾಯಕ ಆಯುಕ್ತ ರಾಮರಾವ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಅಶೋಕ್ ಪಿ., ಕಂಕನಾಡಿ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ. ಆರ್., ಠಾಣಾ ಸಿಬ್ಬಂದಿ ಭಾಗವಹಿಸಿದ್ದರು. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.