ಮುಂಬೈ, ಅ 16 (MSP): ಉದಯೋನ್ಮುಖ ರೂಪದರ್ಶಿಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೃತದೇಹವನ್ನು ದೊಡ್ಡದೊಂದು ಸೂಟ್ಕೇಸ್ ತುರುಕಿಸಲ್ಪಟ್ಟ ಸ್ಥಿತಿಯಲ್ಲಿ ಮುಂಬಯಿಯ ಮಲಾಡ್ನಲ್ಲಿ ರಸ್ತೆ ಬದಿಯಲ್ಲಿ ಅ. 16 ರ ಮಂಗಳವಾರ ಪತ್ತೆಯಾಗಿದೆ.
ಕೊಲೆಯಾದ ಮಾಡೆಲ್ ನ್ನು 20 ವರ್ಷದ ಮಾನಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಈಕೆ ಮಾಡೆಲ್ ಆಗುವ ಬಯಕೆಯಿಂದ ರಾಜಸ್ಥಾನದ ಕೋಟಾದಿಂದ ಮುಂಬಯಿಗೆ ಬಂದಿದ್ದಳು. ವಿದ್ಯಾರ್ಥಿನಿಯಾಗಿದ್ದ ಮಾನಸಿ ಈವೆಂಟ್ ಮ್ಯಾನೇಜ್ಮೆಂಟ್, ಡಿಸೈನಿಂಗ್ ಮುಂತಾದ ಉದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಳು.
ಘಟನೆ ಬೆಳಕಿಗೆ ಬಂದು ಕೇವಲ ಒಂದು ಗಂಟೆಯಲ್ಲಿ ಪೊಲೀಸರು ಆಕೆಯ ಸಹಪಾಠಿಯಾದ ಆರೋಪಿ ಮುಜಮ್ಮಿಲ್ ಸಯ್ಯದ್ (19) ನನ್ನು ಬಂಧಿಸಿದ್ದಾರೆ. ಈತ ಮೂಲತಃ ಹೈದರಬಾದ್ ನವನಾಗಿದ್ದು ಪಶ್ಚಿಮ ಅಂಧೇರಿಯ ಮಿಲ್ಲತ್ ನಗರದ ನಿವಾಸಿಯಾಗಿದ್ದಾನೆ. ಪೊಲೀಸರ ನೀಡಿದ ಮಾಹಿತಿಯಂತೆ ಈತ ಕೊಲೆಯಾದ ಮಾನಸಿಯ ಪರಿಚಯಸ್ಥನಾಗಿದ್ದಾನೆ.
ಹತ್ಯೆಗೆ ಮುನ್ನ ಮುಜಮ್ಮಿಲ್,ಮಾನಸಿಗೆ ಫೋನ್ ಕರೆ ಮಾಡಿ ತನ್ನ ಫ್ಲಾಟಿಗೆ ಕರೆಸಿಕೊಂಡಿದ್ದಾನೆ. ಆಕೆ ಬಂದ ಕ್ಷಣಾರ್ಧದೊಳಗೆ ಇವರಿಬ್ಬರಲ್ಲಿ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿದೆ. ಪರಿಣಾಮವಾಗಿ ಮುಜಮ್ಮಿಲ್ ಭಾರವಾದ ವಸ್ತುವಿನಿಂದ ಆಕೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ.
ಆ ಬಳಿಕ ಪೊಲೀಸರ ಬಳಿ ಆತ ನೀಡಿದ ಹೇಳಿಕೆಯಂತೆ, ಮಾನಸಿಯ ಮೃತ ದೇಹವನ್ನು ಟ್ರಾವೆಲಿಂಗ್ ಸೂಟ್ ಕೇಸಿನಲ್ಲಿ, ಕುತ್ತಿಗೆ-ಕೈಗಳನ್ನು ಬಿಗಿದು ತುಂಬಿದ್ದಾನೆ. ಅನಂತರ ಮುಂಬಯಿ ವಿಮಾನ ನಿಲ್ದಾಣಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಾನೆ. ದಾರಿ ಮಧ್ಯೆ ಆತ ಡ್ರೈವರ್ ಗೆ ಮಲಾಡ್ ಪಶ್ಚಿಮದಲ್ಲಿ ಮೈಂಡ್ ಸ್ಪೇಸ್ ಹಿಂಬದಿ ರಸ್ತೆಗೆ ಕಾರನ್ನು ತಿರುಗಿಸುವಂತೆ ಹೇಳಿದ್ದಾನೆ. ಅಲ್ಲೇ ರಸ್ತೆ ಬದಿ ಸೂಟ್ಕೇಸನ್ನು ಇಳಿಸಿದ್ದಾನೆ. ಮುಂದಿನ ದಾರಿಯನ್ನು ತಾನು ಆಟೋದಲ್ಲಿ ಕ್ರಮಿಸುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾನೆ.
ಕ್ಯಾಬ್ ಚಾಲಕನು ತಕ್ಷಣಾ ಪೊಲೀಸರನ್ನು ಜಾಗೃತಗೊಳಿಸಿದ್ದಾನೆ. ಅಲ್ಲಿಂದ ಕೇವಲ ನಾಲ್ಕೇ ತಾಸಿನ ಒಳಗೆ ಪೊಲೀಸರು ಮುಜಮ್ಮಿಲ್ನನ್ನು ಅರೆಸ್ಟ್ ಮಾಡಿದ್ದಾನೆ. ಬಂಗೂರ್ನಗರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ