ಮುಂಬೈ, ಅ 16 (MSP): ಧರ್ಮ ಸಾಮರಸ್ಯದ ಕಾರ್ಯಕ್ರಮವೊಂದರಲ್ಲಿ, ಕ್ಯಾಥೋಲಿಕ್ ಪಾದ್ರಿಯೊಬ್ಬರು ಸಾಂಪ್ರದಾಯಿಕ ಗಾರ್ಬಾ ನೃತ್ಯಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಸೂರೆಗೊಳಿಸಿದ ಘಟನೆ ಮುಂಬೈನ ಮಾಟುಂಗ ನಗರದಲ್ಲಿ ಅ.14 ರ ಭಾನುವಾರ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೃತ್ಯ ಮಾಡಿದ ಪಾದ್ರಿ ನೆಟ್ಟಿಗರ ಪ್ರಶಂಸೆಗೊಳಗಾಗಿದ್ದಾರೆ.
ಮಾಟುಂಗದ ಡಾನ್ ಬಾಸ್ಕೋ ಚರ್ಚ್ ನ ಆಡಳಿತ ಮಂಡಳಿ ನವರಾತ್ರಿ ಪ್ರಯುಕ್ತ ’ದಂಡಿಯಾ ಧಮಾಕ’ ಎನ್ನುವ 9 ದಿನಗಳ ವಿಶೇಷ ಧಾರ್ಮಿಕ ಸಾಮರಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮದವರು ಭಾಗವಹಿಸಿದ್ದರು. ಈ ಸಂದರ್ಭ ಗಾರ್ಬಾ ನೃತ್ಯಕ್ಕೆ ಪಾದ್ರಿಯೊಬ್ಬರು ತಮ್ಮ ದೀಕ್ಷೆಯ ವಸ್ತ್ರ ಧರಿಸಿ ಹೆಜ್ಜೆ ಹಾಕಿ ನೆರೆದಿದ್ದವರ ಮನಸೂರೆಗೊಳಿಸಿದ್ದರು.
ಡಾನ್ ಬಾಸ್ಕೋ ಶಾಲೆಯ ಮುಖ್ಯಸ್ಥರಾದ ಫಾದರ್ ಕ್ರಿಸ್ಪಿನೊ ಡಿ ಸೋಜಾ ಗಾರ್ಬಾ ನೃತ್ಯ ಮಾಡಿದ್ದು ಇದೀಗ ಈ ವಿಡೀಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಥೋಲಿಕ್ ಸಮುದಾಯದ ಧರ್ಮಗುರುಗಳೊಬ್ಬರು ಸಾಂಪ್ರದಾಯಿಕ ಗಾರ್ಬಾ ನೃತ್ಯ ಮಾಡಿದ್ದು ನಿಜಕ್ಕೂ ಸಂತೋಷ ತಂದಿದೆ. ಇದು ಅವರ ಧಾರ್ಮಿಕ ಸಾಮರಸ್ಯವನ್ನು ಬಿಂಬಿಸುತ್ತದೆ. ವಿವಿಧ ಸಮುದಾಯದ ನಡುವಿನ ಉತ್ತಮ ಬಾಂಧವ್ಯಕ್ಕೆ ಇದು ನಾಂದಿಯಾಗಲಿದೆ ಎಂದು ಬಾಂಬೆ ಕ್ಯಾಥೋಲಿಕ್ ಸಭಾದ ಸದಸ್ಯರಾದ ಗೋಡ್ಪ್ರಿ ಪಿಮೆಂಟಾ ಹೇಳಿದ್ದಾರೆ.
ಆದರೆ ಈ ಬಗ್ಗೆ ಫಾದರ್ ಕ್ರಿಸ್ಪಿನೊ ಡಿ ಸೋಜಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.