ಕುಂದಾಪುರ, ಅ 9: ಎರಡು ವರ್ಷದ ಹಿಂದೆ ತಿರುಪತಿ ಯಾತ್ರೆಗೆಂದು ಹೋದಾಗ ಜನಜಂಗುಳಿಯಲ್ಲಿ ಕಾಣೆಯಾದ ತಂದೆಗೆ ತೀವ್ರ ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಬದುಕಿರುವ ಆಸೆಯನ್ನೆ ಬಿಟ್ಟ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಅಂದು ಕಾಣೆಯಾದ ತಂದೆ ಜೀವಂತವಾಗಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಮತ್ತೆ ತಂದೆಯ ಹುಡುಕಾಟ ಮಕ್ಕಳು ಸಿದ್ಧರಾದ ವಿಧ್ಯಮಾನ ಕುಂದಾಪುರ ತಾಲೂಕು ನಾಗೂರಿನಲ್ಲಿ ನಡೆದಿದೆ.
ನಾಗೂರುನ ತೆಂಕಬೆಟ್ಟು ನಾಗಪ್ಪಯ್ಯ ಆಚಾರ್ (62) ಅವರ ಕುಟುಂಬದವರು ದಿನಾಂಕ 22-9-2005ರಂದು ತಿರುಪತಿ ಯಾತ್ರೆಗೆ ತೆರಳಿದ್ದರು. ತಿರುಮಲದಲ್ಲಿ ದೇವರ ದರ್ಶನಕ್ಕೆ ಸರದಿಯಲ್ಲಿ ನಾಗಪ್ಪಯ್ಯ ಆಚಾರ್ ಮಕ್ಕಳು ಮುಂದೆ ಇದ್ದರು. ಹಿಂದೆ ನಾಗಪ್ಪಯ್ಯ ಆಚಾರ್ ಮತ್ತು ಇಬ್ಬರು ಬಂಧುಗಳು ಇದ್ದರು. ಮಕ್ಕಳುಮುಂದೆ ಕ್ರಮಿಸಿದಂತೆ ಗೇಟ್ ಹಾಕಲಾಯಿತು. ನಂತರ ಗೇಟ್ ತಗೆದಾಗ ಸರದಿಯಲ್ಲಿದ್ದ ನಾಗಪ್ಪ ಆಚಾರ್ ಕಣ್ಮರೆಯಾಗಿದ್ದರು. ಆ ಜನಜಂಗುಳಿಯಲ್ಲಿ ಅವರು ಎಲ್ಲಿ ಹೋದರು ಎಂದು ಯಾರಿಗೂ ಗೊತ್ತಾಗಲಿಲ್ಲ. ತೀವ್ರ ಹುಡುಕಾಟ ಮಾಡಿದರು. ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿದರು. ತಿರುಮಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಏನೇ ಮಾಡಿದರೂ ಸರದಿ ಸಾಲಿನಲ್ಲಿ ಬಂಧುಗಳ ಜೊತೆಗಿದ್ದ ನಾಗಪ್ಪಯ್ಯ ಆಚಾರ್ ಆಶ್ಚರ್ಯಕರ ರೀತಿಯಲ್ಲಿ ಕಾಣೆಯಾಗುತ್ತಾರೆ. ಹೀಗೆ ತಿಂಗಳುಗಳ ಕಾಲ ಹುಡುಕಾಟ ನೆಡೆಸಿದರೂ ನಿಷ್ಪ್ರಯೋಜನವಾಗುತ್ತದೆ. ದಿನ ಕಳೆಯುತ್ತ ವರ್ಷ ಎರಡುವಾದರೂ ಸುಳಿವು ಇರೋದಿಲ್ಲ. ನಿರಂತರವಾಗಿ ತಿರುಮಲ ಪೊಲೀಸ್ ಠಾಣೆ ಸಂಪರ್ಕದಲ್ಲಿದ್ದರೂ ಕೂಡಾ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ.
ಪೇಸ್ಬುಕ್ ನಲ್ಲಿ ಬಂತು ಪೋಟೋ
ಆದರೆ ಅ.7-2017ರಂದು ಪೇಸ್ಬುಕ್ ಪೇಜ್ನಲ್ಲಿ ದಿಢೀರ್ ಅಂತ ತೀರಾ ಅಸಹಾಯಕ ಸ್ಥಿತಿಯಲ್ಲಿ ಎಲ್ಲೋ ಕಟ್ಟಡದ ಬದಿಯಲ್ಲಿ ಕುಳಿತಿರುವ ನಾಗಪ್ಪಯ್ಯ ಆಚಾರ್ ಅವರ ಪೋಟೋ ಪೋಸ್ಟಾಗುತ್ತದೆ. ಕಲ್ಪನಾ ಎನ್ನುವವರು ಈ ಪೋಟೋವನ್ನು ಪೇಸ್ಬುಕ್ ಹಾಕುತ್ತಾರೆ. ಈ ಪೋಟೋ ನೋಡುತ್ತಲೇ ನಾಗಪ್ಪಯ್ಯ ಆಚಾರ್ ಪುತ್ರ ಶ್ರೀಧರ್ ಆಚಾರ್ ಇವರೇ ನನ್ನ ತಂದೆ ಎಂದು ಗುರುತಿಸುತ್ತಾರೆ. ತಂದೆಯ ಧಾರುಣ ಸ್ಥಿತಿ ಕಂಡು ಕಣ್ಣಿರಿಡುತ್ತಾರೆ. ದಯವಿಟ್ಟು ನನ್ನ ತಂದೆ ಎಲ್ಲಿದ್ದಾರೆಂದು ತಿಳಿಸಿ ಎಂದು ಮೊರೆ ಇಡುತ್ತಾರೆ.
ಆದರೆ ಪೋಟೋ ಪೇಸ್ಬುಕ್ನಲ್ಲಿ ಮೊದಲಿಗೆ ಯಾರು ಪೋಸ್ಟ್ ಮಾಡಿದರು? ಈ ಪೋಟೋ ಕ್ಲಿಕಿಸಿದ್ದು ಯಾರು? ಎಲ್ಲಿ ಕ್ಲಿಕ್ಕಿಸಿದ್ದರು? ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಪೋಟೋದ ಮೂಲ ಹುಡುಕಾಟಕ್ಕೆ ಪುತ್ರ ಶ್ರೀಧರ್ ಆಚಾರ್ ಮುಂದಾಗಿದ್ದಾರೆ. ಪೋಟೋವನ್ನು ಗಮನಿಸುವಾಗ ಪೋಟೋದ ಮೇಲೆ ಕನ್ನಡದಲ್ಲಿ ’ನಿಮ್ಮ ತಂದೆ ತಾಯಿಗೆ ವಯಸ್ಸಾದ ಮೇಲೆ ಹೀಗೆ ಹೊರಗೆ ಹಾಕ್ತಿರಾ?’ ಎನ್ನುವ ಬರಹವಿದೆ. ಇದನ್ನು ಗಮನಿಸಿದರೆ ಆ ವ್ಯಕ್ತಿ ಕರ್ನಾಟಕದಲ್ಲಿಯೇ ಇರುವ ಸಾಧ್ಯತೆಗಳು ಇವೆ.
ಈ ಪೋಟೋದ ಮೂಲ ಹುಡುಕಾಟಕ್ಕೆ ಈಗಾಗಲೇ ಶ್ರೀಧರ್ ಮುಂದಾಗಿದ್ದಾರೆ. ಹುಡುಕಾಟ ಸುಲಭವಲ್ಲ ಆದರೆ ತಂದೆಯನ್ನು ಮನೆಗೆ ಕರೆತರುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ.