ಕಾಸರಗೋಡು, ಅ 16(SM): ಕೇರಳದಲ್ಲಿ ತಿಂಗಳ ಹಿಂದೆ ಅವಾಂತರವನ್ನೇ ಸೃಷ್ಠಿಸಿದ್ದ ಮಳೆ ಇದೀಗ ಮತ್ತೆ ಚುರುಕುಗೊಂಡಿದೆ. ಕೇರಳದ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಕಾಸರಗೋಡಿನಲ್ಲಿ ಸುರಿದ ಗಾಳಿ ಮಳೆಯಿಂದಾಗಿ ಹಲವೆಡೆ ಅಪಾರ ಹಾನಿ ಉಂಟಾಗಿದೆ.
ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಗುಡುಗು ಮಿಂಚಿನೊಂದಿಗೆ ಕೂಡಿದ ಧಾರಾಕಾರ ಮಳೆ ಸುರಿದಿದೆ. ಭಾರೀ ಮಳೆಯ ಪರಿಣಾಮ ಹಲವಡೆ ಭೂ ಕುಸಿತ ಉಂಟಾಗಿದೆ. ಬೀಮನಡಿ ಎಂಬಲ್ಲಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ಥಗೊಂಡಿದೆ.
ರಸ್ತೆ ಬದಿಯ ಗುಡ್ಡವು ಇಂದು ಸಂಜೆ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ. ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಬಳಿಕ ಜೆಸಿಬಿಗಳ ಸಹಾಯದಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗಿದೆ. ಆದರೆ, ಮತ್ತಷ್ಟು ಕುಸುಯುವ ಭೀತಿ ಇರುವ ಕಾರಣ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ಭಾರೀ ಗಾಳಿ ಮಳೆಯಿಂದಾಗಿ ಹಲವೆಡೆ ಕೃಷಿಗೆ ಹಾನಿ ಉಂಟಾಗಿದೆ. ಹಲವು ಕಡೆಗಳಲ್ಲಿ ಮರಗಳು ಧರಾಶಾಹಿಯಾಗಿದ್ದು, ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಇತರ ಕಡೆಗಳಲ್ಲೂ ನಷ್ಟ ಉಂಟಾದ ಬಗ್ಗೆಯೂ ವರದಿಯಾಗಿದೆ ಎಂದು ತಿಳಿದು ಬಂದಿದೆ.